ಮಹಾಶಿವರಾತ್ರಿಯಂದು ದೇಶಾದ್ಯಂತ ಬಿಡುಗಡೆಯಾಗಿರುವ ರಾಬರ್ಟ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಸ್ಯಾಂಡಲ್ವುಡ್ ಮಟ್ಟಿಗೆ ಹಣ ಗಳಿಕೆಯಲ್ಲಿ ರಾಬರ್ಟ್ ಸಿನಿಮಾ ಹೊಸ ದಾಖಲೆ ಬರೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದೇ ವಿಚಾರ ರಾಕಿಂಗ್ ಸ್ಟಾರ್ ಯಶ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
ಸ್ಯಾಂಡಲ್ವುಡ್ನ ಸ್ಟಾರ್ ನಟರಾದ ಯಶ್ ಮತ್ತು ದರ್ಶನ್ಗೆ ಬಹುದೊಡ್ಡ ಅಭಿಮಾನಿಗಳ ಬಳಗವಿದೆ. ದರ್ಶನ್ ಎರಡು ದಶಕಗಳಿಂದ ಚಂದನವನದಲ್ಲಿ ಡಿ ಬಾಸ್ ಆಗಿ ಮಿಂಚುತ್ತಿದ್ದಾರೆ. ಯಶ್ ಅವರು ಕೆಜಿಎಫ್ ಚಿತ್ರದ ಮೂಲಕ ಗಡಿಯಿಂದಾಚೆಗೆ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಈ ನಟರಿಬ್ಬರ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗುತ್ತದೆ ಅಂದರೆ ಗಲ್ಲಾ ಪೆಟ್ಟಿಗೆ ಉಡೀಸ್ ಆಗುವುದು ಗ್ಯಾರೆಂಟಿ.
ಇದೀಗ ರಾಬರ್ಟ್ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿರುವುದರ ನಡುವೆಯೇ ನಟರಿಬ್ಬರ ಅಭಿಮಾನಿಗಳು ಜಾಲತಾಣದಲ್ಲಿ ಸಂಘರ್ಷಕ್ಕೆ ಇಳಿದಿದ್ದಾರೆ. ಸದ್ಯ ರಾಬರ್ಟ್ ಚಿತ್ರದ ಮೊದಲ ದಿನ ಕಲೆಕ್ಷನ್ ಎರಡು ಭಾಷೆಯಲ್ಲಿ ಸೇರಿ 20 ಕೋಟಿ ರೂ.ಗೂ ಹೆಚ್ಚು ಎಂದು ಹೇಳಲಾಗುತ್ತಿದೆ. ಕೆಜಿಎಫ್ ಐದು ಭಾಷೆಯಲ್ಲಿ ಸೇರಿ ಮೊದಲ ದಿನ 18 ಕೋಟಿ ರೂ. ಗಳಿಸಿತ್ತು ಎಂದು ದರ್ಶನ್ ಅಭಿಮಾನಿಗಳು ಜಾಲತಾಣದಲ್ಲಿ ಟ್ವೀಟ್ ಮಾಡುತ್ತಿದ್ದಾರೆ.
ನಟ ದರ್ಶನ್ ಅವರು ಕೆಜಿಎಫ್ ದಾಖಲೆಯನ್ನು ಮುರಿದಿದ್ದಾರೆ ಎಂದು ಅಭಿಮಾನಿಗಳು ಟ್ವೀಟ್ ಮಾಡಿರುವುದು ಯಶ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಯಶ್ ಅಭಿಮಾನಿಗಳು ಕೆಜಿಎಫ್ ದಾಖಲೆಯನ್ನು ಕೆಜಿಎಫ್ 2ನಿಂದ ಮಾತ್ರ ಮುರಿಯಲು ಸಾಧ್ಯ ಎನ್ನುತ್ತಿದ್ದಾರೆ.
ಆದರೆ, ಇದರಲ್ಲಿ ಯಾವುದು ಸತ್ಯ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ. ಸದ್ಯ ಓಡಾಡುತ್ತಿರುವ ಅಂಕಿ-ಅಂಶಗಳು ಎಷ್ಟು ಸತ್ಯ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಈ ಎಲ್ಲ ಕುತೂಹಲಕ್ಕೆ ಚಿತ್ರ ನಿರ್ಮಾಪಕರ ಬಳಿ ಮಾತ್ರ ಉತ್ತರವಿದೆ. ಆದರೂ ಅಭಿಮಾನಿಗಳು ಮಾತ್ರ ತಮ್ಮ ನಟರೇ ಮೇಲೂ ಎಂದು ವಾದಿಸುವ ಮೂಲ ಫ್ಯಾನ್ಸ್ ವಾರ್ಗೆ ಸಾಕ್ಷಿಯಾಗಿದ್ದಾರೆ.
ಫ್ಯಾನ್ಸ್ಗಳ ಟ್ವೀಟ್ ಸಮರವನ್ನು ಈ ಕೆಳಗಿನ ಟ್ವೀಟ್ಗಳಲ್ಲಿ ನೀವು ನೋಡಬಹುದಾಗಿದೆ...