ವಿಜಯ್ ಅಭಿನಯದ ಕೊನೇ ಸಿನಿಮಾ 'ಜನ ನಾಯಗನ್'
- ತಮಿಳುನಾಡು ಸಿಎಂ, ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ
- ಜುಲೈ 23ಕ್ಕೆ ಜನ ನಾಯಗನ್ ರಿಲೀಸ್ಗೆ ಫ್ಯಾನ್ಸ್ ಕುತೂಹಲ
- ತಮಿಳುನಾಡಿನಲ್ಲಿ ಮಾತ್ರ ಸಿನಿಮಾ ಟಿಕೆಟ್ ಬೆಲೆ 190 ರೂ. ಅಷ್ಟೇ
Jana Nayagan: ಇದೇ ಜುಲೈ 23ಕ್ಕೆ ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿರುವ ತಮಿಳುನಾಡಿನ ಸಿಎಂ, ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ಕೊನೆಯ ಸಿನಿಮಾ ಜನ ನಾಯಗನ್ ನೋಡಲು ನಟನ ಅಭಿಮಾನಿಗಳು ತುದಿಗಾಲಿನಲ್ಲಿದ್ದಾರೆ. ಈಗಾಗಲೇ ಮುಂಗಡ ಬುಕ್ಕಿಂಗ್ಗಳು ಓಪನ್ ಆಗಿದ್ದು, ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಅದಾಗಲೇ ಮೊದಲ ದಿನದ ಟಿಕೆಟ್ಗಳು ಫುಲ್ ಸೋಲ್ಡ್ ಔಟ್ ಆಗಿವೆ.
ವಿಜಯ್ ಅವರ ಕೊನೆಯ ಚಿತ್ರ ಎಂಬ ಕಾರಣಕ್ಕೆ ಹೆಚ್ಚುವರಿ ಸ್ಕ್ರೀನ್ಗಳಲ್ಲಿ ಜನ ನಾಯಗನ್ ರಿಲೀಸ್ ಆಗಲಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಜುಲೈ 16ರ ಹೊತ್ತಿಗೆ ಚಿತ್ರವು ವಿಶ್ವಾದ್ಯಂತ ಮುಂಗಡ ಬುಕಿಂಗ್‌ನಲ್ಲಿ 4 ಕೋಟಿ ರೂ. ಮೊತ್ತವನ್ನು ದಾಟಿದೆ. ಜು.23ರಂದು ದಕ್ಷಿಣ ಭಾರತದ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6ರಿಂದಲೇ ಫಸ್ಟ್ ಶೋ ಪ್ರಾರಂಭವಾಗಲಿದೆ. ಆದರೆ, ತಮಿಳುನಾಡಿನಲ್ಲಿ ಮಾತ್ರ ಮೊದಲ ಪ್ರದರ್ಶನಗಳು ಬೆಳಗ್ಗೆ 9ರಿಂದ ಆರಂಭಗೊಳ್ಳಲಿದೆ.
ಈ ಹಿಂದೆಲ್ಲ, ವಿಜಯ್ ಅಥವಾ ಅಜಿತ್ ಕುಮಾರ್ ನಟನೆಯ ಸಿನಿಮಾಗಳ ಟಿಕೆಟ್‌ಗಳನ್ನು ತಮಿಳುನಾಡಿನಲ್ಲಿ ಮೊದಲ ದಿನದ ಮೊದಲ ಪ್ರದರ್ಶನಕ್ಕೆ ಬರೋಬ್ಬರಿ 1,000 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಆದರೀಗ, ವಿಜಯ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಜನರಿಂದ ದುಬಾರಿ ಹಣ ಪೀಕಲು ಅವಕಾಶವಿಲ್ಲ. ಹೀಗಾಗಿ, ತಮ್ಮ ಪಕ್ಷದ ನಾಯಕರಿಗೆ ವಿಜಯ್ ಮುಂಚಿತವಾಗಿಯೇ ಟಿಕೆಟ್ ವಿಷಯದಲ್ಲಿ ಯಾವುದೇ ಸಮಸ್ಯೆ, ಗೊಂದಲ ಹಾಗೂ ವಿವಾದಗಳು ನಡೆಯದಂತೆ ನೋಡಿಕೊಳ್ಳಲು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದೇ ಕಾರಣಕ್ಕೆ, ತಮಿಳುನಾಡಿನಲ್ಲಿ ಟಿಕೆಟ್ಗಳು 190 ರೂ.ಗೆ ಫಿಕ್ಸ್ ಆಗಿವೆ.
ಇತರೆ ರಾಜ್ಯಗಳಲ್ಲಿ ಫ್ಲೆಕ್ಸಿಬಲ್ ಟಿಕೆಟ್ ದರವಿದೆ. ಕರ್ನಾಟಕದಂತಹ ರಾಜ್ಯಗಳಲ್ಲಿ 800ರಿಂದ 1,000 ರೂ.ಗೆ ಒಂದು ಟಿಕೆಟ್ಗಳು ಮಾರಾಟವಾಗುತ್ತಿವೆ. ಆದರೆ, ತಮಿಳುನಾಡಿನಲ್ಲಿ ನಿಗದಿತ ದರ ನೀಡಲಾಗಿದೆ. ಅಲ್ಲಿಗೆ, 190 ರೂ.ಗಿಂತ 1 ರೂ. ಹೆಚ್ಚಿನ ದರದಲ್ಲಿ ಟಿಕೆಟ್ ಮಾರಾಟ ಮಾಡಲು ಸಾಧ್ಯವಿಲ್ಲ. ತಮಿಳು ಜನಕ್ಕೆ ವಿಜಯ್ ಬಹುದೊಡ್ಡ ಸ್ಟಾರ್ ಆಗಿರುವುದರಿಂದ ಅವರಿಗೆ ಇದು ನಟನ ಕೊಡುಗೆಯಾಗಿದೆ ಎಂದು ಫೈನಾನ್ಶಿಯರ್ ಮತ್ತು ವಿತರಕ ತಿರುಪ್ಪೂರು ಸುಬ್ರಮಣಿಯಂ ಹೇಳಿದ್ದಾರೆ.
ಅಪಾರ ಸಂಖ್ಯೆಯಲ್ಲಿ ಮೊದಲ ದಿನ ಮೊದಲ ಶೋಗೆ ಥಿಯೇಟರ್ಗಳಿಗೆ ನುಗ್ಗಲಿರುವ ವಿಜಯ್ ಅಭಿಮಾನಿಗಳು ಮತ್ತು ಸಿನಿಪ್ರಿಯರು, ಸಿಎಂ ಆಗಿ ಜೋಸೆಫ್ ವಿಜಯ್ ಅವರು ತಮ್ಮೊಂದಿಗೆ ಕುಳಿತು ಸಿನಿಮಾ ನೋಡುತ್ತಾರೆಯೇ? ಎಂಬ ಕುತೂಹಲವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ. ಅಸಲಿಗೆ, ವಿಜಯ್ ತಮ್ಮ ಅಭಿಮಾನಿಳೊಂದಿಗೆ ಕೂತು ಚಿತ್ರ ವೀಕ್ಷಿಸುತ್ತಾರಾ ಎಂಬುದನ್ನು ಜುಲೈ 23ರಂದೇ ನೋಡಬೇಕಿದೆ,(ಏಜೆನ್ಸೀಸ್).