ಮುಂಬೈ: ತಮ್ಮ ಹೆಸರಿಗೆ ಮಸಿ ಬಳಿಯುವುದಕ್ಕೆ ಮುಂದಾಗಿದ್ದ ನಟಿ ಪಾಯಲ್ ಘೋಷ್ ವಿರುದ್ಧ ಸೋಮವಾರವಷ್ಟೇ ರಿಚಾ ಚಡ್ಡಾ, ಮಾನನಷ್ಟ ಮೊಕದ್ದಮೆ ಹಾಕಿದ್ದರು. ಆದರೆ, ಮಾನಹಾನಿ ಮಾಡ್ತಿರೋದು ನಾನಲ್ಲ, ಅವರೇ ನನ್ನ ಮಾನಹಾನಿ ಮಾಡುತ್ತಿದ್ದಾರೆ ಎಂದು ಪಾಯಲ್ ಘೋಶ್ ಗುಡುಗಿದ್ದಾರೆ.
ಇದನ್ನೂ ಓದಿ: ಊಟಿಯಲ್ಲಿ ಪ್ರೇಮ್ ‘ಏಕ್ ಲವ್ ಯಾ’
ಕಳೆದ ತಿಂಗಳಷ್ಟೇ, ನಟ-ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ನಟಿ ಪಾಯಲ್ ಘೋಶ್ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ಈ ಸಂದರ್ಭದಲ್ಲಿ ಅನುರಾಗ್ ಕಶ್ಯಪ್ ಖುದ್ದು ತಮ್ಮ ಬಳಿ ತಮಗೆ ನಟಿಯರಾದ ರಿಚಾ ಚಡ್ಢಾ, ಮಾಹಿ ಗಿಲ್ ಮತ್ತು ಹ್ಯೂಮಾ ಖುರೇಷಿ ಮುಂತಾದವರು ಸಹಕರಿಸಿದ್ದಾಗಿ ಹೇಳಿಕೊಂಡಿದ್ದರು.
ಈ ಪ್ರಕರಣದಲ್ಲಿ ತಮ್ಮ ಹೆಸರನ್ನು ಅನಾವಶ್ಯಕವಾಗಿ ಎಳೆದುತಂದಿದ್ದಕ್ಕಾಗಿ ಪಾಯಲ್ ಮೇಲೆ ಮುಂಬೈ ಹೈಕೋರ್ಟ್ನಲ್ಲಿ ರಿಚಾ ಮಾನನಷ್ಟ ಮೊಕ್ಕದ್ದಮೆಯನ್ನು ಹೂಡಿದ್ದಾರೆ. ಯಾವ್ಯಾವುದೋ ವಿಚಾರಕ್ಕೆ ತಮ್ಮನ್ನು ಎಳೆದು ತಂದಿರುವುದರ ಜತೆಗೆ, ಹೆಸರಿಗೆ ಮಸಿ ಬಳಿಯುವುದಕ್ಕೆ ಪ್ರಯತ್ನಿಸಿದ್ದಿಕ್ಕೆ ಒಂದು ಕೋಟಿ 10 ಲಕ್ಷ ರೂಪಾಯಿಗಳನ್ನು ಕಟ್ಟಿಕೊಡಬೇಕು ಎಂದು ಕೇಸ್ ಹಾಕಿದ್ದಾರೆ. ಬರೀ ಪಾಯಲ್ ಘೋಶ್ ಮಾತ್ರವಲ್ಲ, ನಟ ಕಮಾಲ್ ಖಾನ್ ಮತ್ತು ಒಂದು ಖಾಸಗಿ ಸುದ್ದಿವಾಹಿನಿಯ ಮೇಲೂ ಅವರು ಮೊಕದ್ದಮೆ ದಾಖಲಿಸಿದ್ದಾರೆ. ಈ ಪ್ರಕರಣವು ಬುಧವಾರ ಮುಂಬೈ ಹೈಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ.
ಇದನ್ನೂ ಓದಿ: ಬಂಧನವಾಗಿ ತಿಂಗಳ ಬಳಿಕ ರಿಯಾ ಚಕ್ರವರ್ತಿಗೆ ಜಾಮೀನು
ಈ ಸಂಬಂಧ ಮಾತನಾಡಿರುವ ಪಾಯಲ್, 'ಇದು ನಿಜಕ್ಕೂ ಸುಳ್ಳು ಆರೋಪ. ಇದರಲ್ಲಿ ನನ್ನ ತಪ್ಪೇನು ಎಂಬುದು ನನಗೆ ಗೊತ್ತಿಲ್ಲ. ನಿಜ ಹೇಳಬೇಕೆಂದರೆ, ರಿಚಾ ಅವರ ಹೆಸರನ್ನು ಮೊದಲು ತೆಗೆದಿದ್ದು ಅನುರಾಗ್ ಹೊರತು ನಾನಲ್ಲ. ನನ್ನ ಹತ್ತಿರ ಮಾತನಾಡುವ ಭರದಲ್ಲಿ, ರಿಚಾ ಅವರ ಹೆಸರನ್ನು ಅವರು ಹೇಳಿದ್ದರು. ಅದನ್ನೇ ನಾನು ಸಹ ಹೇಳಿದೆ' ಎಂದಿದ್ದಾರೆ.
ತನಗೆ ರಿಚಾ ವೈಯಕ್ತಿಕ ಪರಿಚಯವಿಲ್ಲ ಎಂದಿರುವ ಪಾಯಲ್, 'ನನಗೆ ಆಕೆ ಯಾರು ಎಂದು ಗೊತ್ತಿಲ್ಲ. ಆದರೂ ನನ್ನ ಮೇಲೆ ಕೇಸ್ ಹಾಕಿದ್ದಾರೆ. ನಿಜ ಹೇಳಬೇಕೆಂದರೆ, ಕೇಸ್ ಹಾಕಿರುವುದರಿಂದ ಮಾನಹಾನಿಯಾಗಿರುವುದು ನನ್ನದೇ ಹೊರತು ಅವರದ್ದಲ್ಲ. ಈ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇನೆ' ಎಂದು ಅವರು ಹೇಳಿದ್ದಾರೆ.