ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿರುವುದಾಗಿ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ಸುಶಾಂತ್ ಸಾವಿನ ಹಿಂದೆ ರಿಯಾ ಇರಬಹುದು ಎಂದು ಕೆ.ಕೆ. ಸಿಂಗ್ ಎಂಟು ಅಂಶಗಳನ್ನು ಪಟ್ಟಿ ಸಹ ಮಾಡಿದ್ದಾರೆ.
ಇದಕ್ಕೆ ಪ್ರತಿಯಾಗಿ ರಿಯಾ ಸಹ ತಮ್ಮದೇ ರೀತಿಯಲ್ಲಿ ಫೈಟ್ ಮಾಡುತ್ತಿರುವುದು ಗೊತ್ತಿರಬಹುದು. ಈ ಪ್ರಕರಣವನ್ನು ಮುಂಬೈ ಪೊಲೀಸರಿಂದ ಪಾಟ್ನಾ ಪೊಲೀಸರಿಗೆ ವರ್ಗಾಯಿಸಬಾರದು ಎಂದು ಅವರು ಈಗಾಗಲೇ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಕುಚಿಕುಗಳ ದಿನಕ್ಕೆ ಶುಭ ಹಾರೈಸಿದ ಸುಮಲತಾ ಅಂಬರೀಷ್
ಎಲ್ಲಾ ಸರಿ, ಸುಶಾಂತ್ ಸಿಂಗ್ ಅವರ ಕುಟುಂಬದವರು ರಿಯಾ ವಿರುದ್ಧ ತಿರುಗಿ ಬಿದ್ದಿದ್ದೇಕೆ ಮತ್ತು ಅವರ ವಿರುದ್ಧ ದೂರು ದಾಖಲಿಸಿರುವುದೇಕೆ ಎಂಬ ಪ್ರಶ್ನೆಯೊಂದು ಎಲ್ಲೆಡೆ ಕೇಳಿ ಬರುತ್ತಿದೆ. ಪ್ರಮುಖವಾಗಿ ಮುಂಬೈ ಪೊಲೀಸರೇ ಈ ವಿಷಯವಾಗಿ ಬಹಳ ತಲೆ ಕೆಡಿಸಿಕೊಂಡಿದ್ದಾರೆ.
ಈ ಹಿಂದೆ ಸುಶಾಂತ್ ಸಾವಿನ ವಿಚಾರಣೆ ಶುರುವಾದಾಗ, ಮುಂಬೈ ಪೊಲೀಸರು ಮೊದಲು ವಿಚಾರಣೆ ಮಾಡಿದ್ದು ಅವರ ಕುಟುಂಬದವರನ್ನೇ. ಸುಶಾಂತ್ ತಂದೆ ಕೆ.ಕೆ. ಸಿಂಗ್, ಸಹೋದರಿ ಮುಂತಾದವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆ ನಂತರವಷ್ಟೇ ಅವರೆಲ್ಲಾ ಪಾಟ್ನಾಗೆ ವಾಪಸ್ಸಾಗಿದ್ದರು.
ಮುಂಬೈ ಪೊಲೀಸರ ತಲೆ ಕೊರೆಯುತ್ತಿರುವ ವಿಷಯವೇನೆಂದರೆ, ಸುಶಾಂತ್ ಕುಟುಂಬದವರನ್ನು ಕಳೆದ ತಿಂಗಳ ವಿಚಾರಣೆಗೆ ಒಳಪಡಿಸಿದಾಗ, ಯಾರೂ ಸಹ ರಿಯಾ ಬಗ್ಗೆ ಒಂದೇ ಒಂದು ಮಾತನ್ನು ಆಡಿರಲಿಲ್ಲವಂತೆ. ಆಕೆಯ ಬಗ್ಗೆ ಯಾವುದೇ ಸಂಶಯ ಹೊರಹಾಕಿರಲಿಲ್ಲವಂತೆ. ಆಗ ಸುಮ್ಮನಿದ್ದ ಅವರು, ಈ ಒಂದು ತಿಂಗಳ ನಂತರ ರಿಯಾ ವಿರುದ್ಧ ಯಾಕೆ ದೂರು ಸಲ್ಲಿಸಿದ್ದಾರೆ ಎಂಬುದು ಮುಂಬೈ ಪೊಲೀಸರಿಗೆ ಬಗೆಹರಿಯದ ಪ್ರಶ್ನೆಯಾಗಿ ಉಳಿದಿದೆ.
ಇಷ್ಟಕ್ಕೂ ಸುಶಾಂತ್ ಕುಟುಂಬದವರಿಗೆ ರಿಯಾ ಕುರಿತು ಅಷ್ಟೊಂದು ಸಂಶಯವೇಕೆ ಮತ್ತು ಆಕೆಯ ವಿರುದ್ಧ ದೂರು ಕೊಟ್ಟಿದ್ದೇಕೆ ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.