ಸಿನಿವಾಣಿ

ಸಾರಾಗೆ ಹೆದರಿ ಬಿಡುಗಡೆಯನ್ನೇ ಮುಂದೂಡಿದ 'ಕೂಲಿ ನಂಬರ್ 1' ಚಿತ್ರತಂಡ

manjunathktgns

ಮುಂಬೈ: ಒಂದು ಕಾಲಕ್ಕೆ ಸಾರಾ ಅಲಿ ಖಾನ್​ ಡೇಟ್ಸ್​​ ಸಿಕ್ಕರೆ ಸಾಕು ಎಂದು ಬಾಲಿವುಡ್​ ನಿರ್ಮಾಪಕರು ಕಾಯುತ್ತಿದ್ದರು. ಆದರೆ, ಇದೀಗ ಸಾರಾ ಡೇಟ್ಸ್​ ಯಾಕಾದರೂ ಸಿಗುತ್ತದೋ ಎಂದು ಹಲವರು ಹೆದರುತ್ತಿದ್ದಾರೆ. ಅದಕ್ಕೆ ಕಾರಣ, ಡ್ರಗ್ಸ್​ ಜಾಲದಲ್ಲಿ ಸಾರಾ ಅಲಿ ಖಾನ್​ ಅವರ ಹೆಸರು ಕೇಳಿ ಬಂದಿರುವುದು.

ಈಗ್ಯಾಕೆ ಈ ವಿಷಯ ಎಂದರೆ, ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಾರಾ ಅಭಿನಯದ 'ಕೂಲಿ ನಂಬರ್​ 1' ಚಿತ್ರವು ಇದೇ ದೀಪಾವಳಿಗೆ ಬಿಡುಗಡೆಯಾಗಬೇಕಿತ್ತು. ದೀಪಾವಳಿಗೆ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸಹ ಘೋಷಿಸಿತ್ತು. ಆದರೆ, ಇದೀಗ ಚಿತ್ರವನ್ನು ಕ್ರಿಸ್ಮಸ್​ಗೆ ಪೋಸ್ಟ್​ಪೋನ್​ ಮಾಡಲಾಗಿದೆ.

ಅದಕ್ಕೆ ಕಾರಣ ಏನು ಎಂದು ಹುಡುಕುತ್ತಾ ಹೋದರೆ, ಡ್ರಗ್ಸ್​ ಜಾಲದಲ್ಲಿ ಸಾರಾ ಹೆಸರು ಕೇಳಿ ಬಂದಿರುವುದರಿಂದ, ಆಕೆಯ ಕುರಿತಾಗಿ ಎಲ್ಲಾ ಕಡೆ ನೆಗೆಟಿವ್​ ಅಭಿಪ್ರಾಯಗಳು ಹೆಚ್ಚಾಗಿವೆ. ಇಂತಹ ಸಂದರ್ಭದಲ್ಲಿ ಚಿತ್ರವೇನಾದರೂ ಬಿಡುಗಡೆಯಾದರೆ, ನೇರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದು ಚಿತ್ರತಂಡದ ಭಯ. ಅದೇ ಕಾರಣಕ್ಕೆ ಚಿತ್ರವನ್ನು ಇನ್ನೊಂದು ತಿಂಗಳ ಕಾಲ ಮುಂದೂಡಲಾಗಿದೆಯಂತೆ. ಒಂದು ತಿಂಗಳಲ್ಲಿ ಪರಿಸ್ಥಿತಿ ಸ್ವಲ್ಪ ತಿಳಿಯಾಗಬಹುದು ಎಂಬುದು ಚಿತ್ರತಂಡದ ಲೆಕ್ಕಾಚಾರ.

ಹಾಗೆ ನೋಡಿದರೆ, 'ಕೂಲಿ ನಂಬರ್​ ಒನ್​' ಚಿತ್ರವು ದೀಪಾವಳಿ ಸೀಸನ್​ಗೆ ಹೇಳಿ ಮಾಡಿಸಿದ ಚಿತ್ರವಾಗಿತ್ತು. ಇದೊಂದು ಅಪ್ಪಟ ಮನರಂಜನಾ ಚಿತ್ರವಾಗಿದ್ದು, ಪೈಸಾ ವಸೂಲ್​ ಚಿತ್ರವಾಗಲಿದೆಯಂತೆ. ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಿದ್ದರೆ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿರಲಿಲ್ಲವಂತೆ. ಆದರೆ, ಸಾರಾ ಕಾರಣಕ್ಕೆ ಚಿತ್ರ ಬಿಡುಗಡೆಯನ್ನು ಮುಂದಕ್ಕೆ ಹಾಕುವುದು ಚಿತ್ರತಂಡಕ್ಕೆ ಅನಿವಾರ್ಯವಾಗಿದೆ.