ಸಿನಿವಾಣಿ

ಸುಶಾಂತ್​ಗೆ ಡಿಪ್ರೆಶನ್​ ಇತ್ತು ಅಂತ ಜನ ಯಾಕೆ ನಂಬ್ತಿಲ್ಲ? ಸ್ವರ ಪ್ರಶ್ನೆ ...

ಸುಶಾಂತ್​ ಸಿಂಗ್ ರಜಪೂತ್​ ಸಾವಿಗೆ ಕಾರಣವೇನು?

ಅವರಿಗೆ ಮಾನಸಿಕ ಸಮಸ್ಯೆಗಳಿದ್ದವು ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನೂ ಕೆಲವರು ಸುಶಾಂತ್​, ನೆಪೋಟಿಸಂಗೆ (ಸ್ವಜನಪಕ್ಷಪಾತ) ಬಲಿಯಾದರು ಎಂದು ಹೇಳುತ್ತಾರೆ. ಹಾಗೆಯೇ ಸುಶಾಂತ್​ ಸಾವಿನ ಹಿಂದೆ ಅವರ ಗೆಳತಿ ರಿಯಾ ಚಕ್ರವರ್ತಿ ಅವರ ಕೈವಾಡವಿದೆ ಎಂಬ ಥಿಯರಿಯೂ ಇದೆ.

ಅದರಲ್ಲೂ ಸುಶಾಂತ್​ಗೆ ಮಾನಸಿಕ ಸಮಸ್ಯೆಗಳಿದ್ದವು ಎಂದು ಅವರಿಗೆ ಚಿಕಿತ್ಸೆ ಕೊಡುತ್ತಿದ್ದ ವೈದ್ಯರೇ ಹೇಳಿದ್ದಾರೆ. ಅವರಿಗೆ ಬೈಪೋಲಾರ್​ ಸಮಸ್ಯೆ ಇತ್ತು ಮತ್ತು ಅದೇ ಕಾರಣಕ್ಕೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆದರೆ, ಈ ವಿಷಯವನ್ನು ಕೆಲವರು ನಂಬುವ ಸ್ಥಿತಿಯಲ್ಲಿಲ್ಲ. ಸುಶಾಂತ್​ ಯಾವುದೋ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ ಎಂಬ ಅನುಮಾನವನ್ನು ಪದೇಪದೇ ವ್ಯಕ್ತಪಡಿಸುತ್ತಲೇ ಇದ್ದಾರೆ.

ಸುಶಾಂತ್​ಗೆ ಮಾನಸಿಕ ಸಮಸ್ಯೆಗಳಿದ್ದವು ಮತ್ತು ಅವರು ಬೈಪೋಲಾರ್​ನಿಂದ ಬಳಲುತ್ತಿದ್ದರು ಎಂಬ ವಿಷಯವನ್ನು ಇಷ್ಟಕ್ಕೂ ಜನ ಯಾಕೆ ನಂಬುತ್ತಿಲ್ಲ ಎಂಬುದು ತನಗೆ ಅರ್ಥವೇ ಆಗುತ್ತಿಲ್ಲ ಎಂದು ನಟಿ ಸ್ವರಾ ಭಾಸ್ಕರ್​ ಹೆಳಿಕೊಂಡಿದ್ದಾರೆ.

'ಸುಶಾಂತ್​ಗೆ ಬೈಪೋಲಾರ್​ ಖಾಯಿಲೆ ಇತ್ತು ಎಂದು ಜನ ಯಾಕೆ ನಂಬುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಸುಶಾಂತ್​ ಡಿಪ್ರೆಶನ್​ಗೆ ಒಳಗಾದವರಂತೆ ಕಾಣುತ್ತಿರಲಿಲ್ಲ ಎಂದು ಯಾವುದೋ ಲೇಖನದಲ್ಲಿ ಓದಿದೆ. ಇದ್ಯಾವ ತರಹದ ವಾದ. ಇದೊಂದು ಆಂತರಿಕ ಸಮಸ್ಯೆ. ಕಾಣುತ್ತಿಲ್ಲ ಎಂದರೆ ಏನರ್ಥ?' ಎಂದು ಅವರು ಪ್ರಶ್ನಿಸಿದ್ದಾರೆ.

ಈ ಕುರಿತು ಮತ್ತಷ್ಟು ಮಾತನಾಡಿರುವ ಅವರು, 'ಒಬ್ಬ ಮನುಷ್ಯ ಜನಪ್ರಿಯ ಮತ್ತು ಯಶಸ್ವಿಯಾಗಿದ್ದಾನೆ ಎಂಬ ಕಾರಣಕ್ಕೆ ಅವನಲ್ಲೇನೂ ಸಮಸ್ಯೆ ಇಲ್ಲ, ಎಲ್ಲವೂ ಸರಿಯಾಗಿದೆ ಎಂದರ್ಥವಲ್ಲ. ಎಷ್ಟೇ ಜನಪ್ರಿಯ ಮತ್ತು ಯಶಸ್ವಿಯಾಗಿದ್ದರೂ, ಅವರನ್ನೇನೋ ಕಾಡುತ್ತಿರಬಹುದು. ಅದು ಮೇಲ್ನೋಟಕ್ಕೆ ಕಾಣದಿರಬಹುದು' ಎಂದು ಅವರು ಹೇಳಿದ್ದಾರೆ.