ಸಿನಿವಾಣಿ

ರೆಹಮಾನ್​ಗೆ ಬಾಲಿವುಡ್​ನಲ್ಲಿ ಕೆಲಸ ಯಾಕೆ ಕಡಿಮೆ ಆಯ್ತು? ಉತ್ತರ ಇಲ್ಲಿದೆ ನೋಡಿ ...

manjunathktgns

ಆಸ್ಕರ್​ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ ಅವರು ಇತ್ತೀಚೆಗಷ್ಟೇ ಒಂದು ಬಾಂಬ್​ ಸಿಡಿಸಿದ್ದರು. ಬಾಲಿವುಡ್​ನಲ್ಲಿ ಗುಂಪುಗಾರಿಗೆ ಮತ್ತು ಗ್ಯಾಂಗ್​ಗಳು ಹೆಚ್ಚಾಗುತ್ತಿರುವುದರಿಂದಲೇ ತಮಗೆ ಹಿಂದಿ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದರು.

ರೆಹಮಾನ್​ ಅವರ ಈ ಹೇಳಿಕೆ ಅದೆಷ್ಟು ಸುದ್ದಿಯಾಯಿತೆಂದರೆ, ಅವರಿಗೆ ಹೀಗಾಗುತ್ತಿರುವುದಕ್ಕೆ ಕಾರಣ ಆಸ್ಕರ್​ ಪ್ರಶಸ್ತಿಯೇ ಕಾರಣ ಎಂದು ಹಿರಿಯ ನಿರ್ದೇಶಕ ಶೇಖರ್​ ಕಪೂರ್​ ಅಭಿಪ್ರಾಯಪಟ್ಟರು. ಆಸ್ಕರ್​ ಶಾಪ ತಟ್ಟಿದ್ದರಿಂದಲೇ ರೆಹಮಾನ್​ನಂತಹವರಿಗೆ ಕೆಲಸ ಸಿಗುತ್ತಿಲ್ಲ ಎಂದರು. ಹಲವರು ತಮಗೂ ಅಂತಹ ಅನುಭವಗಳಾಗುತ್ತಿವೆ ಎಂದರೆ, ಇನ್ನೂ ಕೆಲವರು ಬಾಲಿವುಡ್​ನಲ್ಲಿರುವ ಗುಂಪುಗಾರಿಕೆಯನ್ನು ಖಂಡಿಸಿದರು.

ಒಟ್ಟಾರೆ, ಈ ಬಗ್ಗೆ ಕೆಲವು ದಿನಗಳ ಕಾಲ ಜೋರು ಚರ್ಚೆ ಬರೀ ಹಿಂದಿ ಚಿತ್ರರಂಗದಲ್ಲಷ್ಟೇ ಅಲ್ಲ, ಒಟ್ಟಾರೆ ಭಾರತೀಯ ಚಿತ್ರರಂಗದಲ್ಲೇ ನಡೆಯುತ್ತಿದೆ. ಇಷ್ಟಕ್ಕೂ ರೆಹಮಾನ್​ ಅವರಿಗೆ ಬಾಲಿವುಡ್​ನಲ್ಲಿ ಯಾಕೆ ಕೆಲಸ ಕಡಿಮೆಯಾಗುತ್ತಿದೆ?

ಈ ಬಗ್ಗೆ ಹೆಸರು ಹೇಳಲಿಚ್ಛಿಸದ ಬಾಲಿವುಡ್​ನ ಸಂಗೀತ ನಿರ್ದೇಶಕರೊಬ್ಬರು ಮಾತನಾಡಿದ್ದಾರೆ. ಅವರ ಪ್ರಕಾರ, ರೆಹಮಾನ್​ ಅವರಿಗೆ ಅವಕಾಶ ಕಡಿಮೆ ಆಗುವುದಕ್ಕೆ ಕಾರಣ, ಅವರ ಡಿಮ್ಯಾಂಡ್​ಗಳಂತೆ. ಪ್ರಮುಖವಾಗಿ, ಚಿತ್ರದ ಹಾಡುಗಳಿಗೆ ಸಂಬಂಧಿಸಿದ ಎಲ್ಲಾ ಹಕ್ಕುಗಳನ್ನು (ಕಾಪಿರೈಟ್​) ತಮಗೆ ಕೊಡಬೇಕು ಎಂದು ರೆಹಮಾನ್​ ಡಿಮ್ಯಾಂಡ್​ ಮಾಡಿದ್ದರಿಂದ ಅವರಿಗೆ ಅವಕಾಶ ಕಡಿಮೆ ಆಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಂದು ಕಾಲಕ್ಕೆ ತಮ್ಮ ಚಿತ್ರಕ್ಕೆ ರೆಹಮಾನ್​ ಅವರೇ ಸಂಗೀತ ಸಂಯೋಜಿಸಬೇಕು ಎಂದು ಪ್ರತಿಯೊಬ್ಬ ನಿರ್ದೇಶಕರು ಸಹ ಆಸೆಪಟ್ಟಿದ್ದರಂತೆ. ಆದರೆ, ಒಂದು ಹಂತದಲ್ಲಿ ರೆಹಮಾನ್​ ಚಿತ್ರದ ಹಾಡುಗಳಿಗೆ ಸಂಬಂಧಿಸಿದ ಹಕ್ಕುಗಳನ್ನು ತಮಗೆ ಬಿಟ್ಟುಕೊಡಬೇಕು ಎಂದು ಕೇಳಿದರಂತೆ. ಸಾಮಾನ್ಯವಾಗಿ ಚಿತ್ರದ ಹಾಡುಗಳ ಹಕ್ಕುಗಳು ನಿರ್ಮಾಪಕರ ಬಳಿ ಇರುತ್ತವೆ. ಸಂಗೀರ ನಿರ್ದೇಶನ ಮಾಡಿದ್ದಿಕ್ಕೆ ಅವರು ಸಂಗೀತ ನಿರ್ದೇಶಕರಿಗೆ ಇಂತಿಷ್ಟು ಸಂಭಾವನೆ ಕೊಟ್ಟಿರುತ್ತಾರೆ. ಸಂಭಾವನೆ ಕೊಡುವುದರ ಜತೆಗೆ ಹಾಡುಗಳಿಗೆ ಸಂಬಂಧಿಸಿದ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ. ಅದನ್ನು ನಿರ್ಮಾಪಕರು ಆಡಿಯೋ ಕಂಪೆನಿಗಳಿಗೆ ಇಂತಿಷ್ಟು ಹಣಕ್ಕೆ ಎಂದು ಮಾರಿಕೊಳ್ಳುತ್ತಾರೆ. ಒಂದು ಪಕ್ಷ ಆ ಹಕ್ಕುಗಳನ್ನು ಸಂಗೀತ ನಿರ್ದೇಶಕರಿಗೆ ಕೊಟ್ಟರೆ, ನಿರ್ಮಾಪಕರ ಕಥೆ ಏನು? ಹಾಗಾಗಿ ಹಾಡುಗಳ ಹಕ್ಕುಗಳನ್ನು ಕೊಡುವ ಪರಿಪಾಠ ಭಾರತದಲ್ಲಿಲ್ಲ.

ಆದರೆ, ರೆಹಮಾನ್​ ತಮಗೆ ಹಕ್ಕು ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರಂತೆ. ಅದೇ ಕಾರಣಕ್ಕೆ, ಹಲವು ನಿರ್ಮಾಪಕರು ರೆಹಮಾನ್​ರಿಂದ ದೂರ ಆದರು ಎಂದು ಹೇಳಲಾಗುತ್ತಿದೆ. ಕರಣ್​ ಜೋಹರ್​ ತಮ್ಮ 'ಕಲ್​ ಹೋ ನ ಹೋ' ಚಿತ್ರದ ಸಂಗೀತಕ್ಕೆ ಮೊದಲು ರೆಹಮಾನ್​ ಬಳಿ ಹೋಗಿದ್ದರಂತೆ. ಯಾವಾಗ ರೆಹಮಾನ್​ ಅವರಿಂದ ಇಂಥದ್ದೊಂದು ಬೇಡಿಕೆ ಬಂತೋ, ಅವರು ಶಂಕರ್​-ಎಹಸಾನ್​-ಲಾಯ್​ ಅವರಿಂದ ಕೆಲಸ ಮಾಡಿದ್ದಾರೆ. ಈ ತರಹ ಅನುಭವ ಬೇರೆ ನಿರ್ಮಾಪಕರಿಗೂ ಆಗಿದ್ದರಿಂದ, ರೆಹಮಾನ್​ ಕ್ರಮೇಣ ಕೆಲಸ ಕಳೆದುಕೊಳ್ಳಬೇಕಾಯಿತು ಎಂದು ಅಭಿಪ್ರಾಯಪಡಲಾಗುತ್ತಿದೆ.