ಸಿನಿವಾಣಿ

ಅಡಕತ್ತರಿಯಲ್ಲಿ ಚಿರಂಜೀವಿ ... ಆ ಇಬ್ಬರಲ್ಲಿ ಯಾರಿಗೆ ಸಪೋರ್ಟ್​?

chetannadiger

ಹೈದರಾಬಾದ್​: ಟಾಲಿವುಡ್​ನ ಹಿರಿಯಣ್ಣನಂತಿರುವ ಚಿರಂಜೀವಿ ಈಗ ಅಡಕತ್ತರಿಯಲ್ಲಿ ಸಿಕ್ಕಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಏನೇ ಸಮಸ್ಯೆಗಗಳು ಎದುರಾದರೂ, ಅದನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರವಹಿಸುವ ಚಿರಂಜೀವಿ, ಈಗ ಒಂದು ಸಮಸ್ಯೆಯಲ್ಲಿ ಸಿಲುಕಿದ್ದು, ಅದನ್ನು ಹೇಗೆ ಬಗೆಹರಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ವಿಷಯವೇನೆಂದರೆ, ತೆಲುಗು ಚಿತ್ರಗಳ ಕಲಾವಿದರ ಸಂಘಕ್ಕೆ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಕನ್ನಡದ ಪ್ರಕಾಶ್​ ರೈ ಮತ್ತು ತೆಲುಗು ನಟ ಮೋಹನ್​ ಬಾಬು ಅವರ ಮಗ ವಿಷ್ಣು ಮಂಚು ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ, ಇಬ್ಬರೂ ತೆಲುಗು ಚಿತ್ರರಂಗದ ದೊಡ್ಡದೊಡ್ಡ ಕಲಾವಿದರನ್ನೆಲ್ಲ ಭೇಟಿ ಮಾಡಿ ಅವರ ಸಪೋರ್ಟ್​ ಕೇಳುತ್ತಿದ್ದಾರೆ.

ಈ ಪೈಕಿ ಪ್ರಮುಖವಾಗಿರುವುದು ನಟ ಚಿರಂಜೀವಿ. ತೆಲುಗು ಚಿತ್ರರಂಗದಲ್ಲಿ ಯಾರೂ ಚಿರಂಜೀವಿ ಅವರ ಮಾತನ್ನು ತೆಗೆದು ಹಾಕುವುದಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಹಾಗಾಗಿ, ಪ್ರಕಾಶ್​ ರೈ ಮತ್ತು ವಿಷ್ಣು ಮಂಚು ಇಬ್ಬರೂ ಚಿರಂಜೀವಿ ಅವರ ಬೆಂಬಲ ಕೇಳಿದ್ದಾರೆ. ಇದರಲ್ಲಿ ಮೊದಲು ಕೇಳಿರುವು ಪ್ರಕಾಶ್​ ರೈ ಅಂತೆ. ಆ ನಂತರ ವಿಷ್ಣು ಮಂಚು ಹೋಗಿ ಬೆಂಬಲ ಕೇಳಿದ್ದಾರೆ. ಈ ಪೈಕಿ ಯಾರನ್ನು ಬೆಂಬಲಿಸಬೇಕು ಎಂಬ ಜಿಜ್ನಾಸೆ ಚಿರಂಜೀವಿ ಅವರದ್ದು.

ಏಕೆಂದರೆ, ಚಿರಂಜೀವಿ ಮತ್ತು ವಿಷ್ಣು ಅವರ ತಂದೆ ಮೋಹನ್​ ಬಾಬು ಹಳೆಯ ಸ್ನೇಹಿತರು. ಆಗಾಗ, ಕಾರಣಾಂತರಗಳಿಂದ ಇಬ್ಬರೂ ಕಿತ್ತಾಡಿಕೊಳ್ಳುತ್ತಾರಾದರೂ, ಇಬ್ಬರ ನಡುವೆ ಬಾಂಧವ್ಯ ಗಟ್ಟಿಯಾಗಿದೆ. ಇನ್ನು, ಚಿರಂಜೀವಿ ಮತ್ತು ಪ್ರಕಾಶ್​ ರೈ ಅವರ ಸಂಬಂಧ ಸಹ ಚೆನ್ನಾಗಿದೆ. ಚಿರಂಜೀವಿ ಅಭಿನಯದ ಹಲವು ಚಿತ್ರಗಳಲ್ಲಿ ಪ್ರಕಾಶ್​ ರೈ ನಟಿಸಿದ್ದಾರೆ. ಹಾಗಾಗಿ, ಇಬ್ಬರ ನಡುವೆ ಯಾರಿಗೆ ಬೆಂಬಲ ಸೂಚಿಸಬೇಕು ಎಂಬ ಗೊಂದಲದಲ್ಲಿ ಚಿರಂಜೀವಿ ಇದ್ದಾರೆ.

ಇನ್ನು, ಪ್ರಕಾಶ್​ ರೈಗೆ ಹೋಲಿಸಿದರೆ ವಿಷ್ಣು ಮಂಚುಗೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಪ್ರಕಾಶ್​ ರೈ ಅದೆಷ್ಟೇ ತೆಲುಗು ಚಿತ್ರಗಳಲ್ಲಿ ನಟಿಸಿದರೂ, ಅವರನ್ನು ಹೊರಗಿನವರು ಎಂದು ಪರಿಗಣಿಸಲಾಗುತ್ತಿದೆ. ಮೇಲಾಗಿ ವಿಷ್ಣು ತಂದೆ ಮತ್ತು ಹಿರಿಯ ನಟ ಮೋಹನ್​ ಬಾಬು, ಇಡೀ ಚಿತ್ರರಂಗಕ್ಕೆ ಬೇಕಾದವರು. ಹಾಗಾಗಿ, ವಿಷ್ಣುಗೆ ಚಿತ್ರರಂಗದವರ ಸಪೋರ್ಟ್​ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ, ಹಿರಿಯ ನಟರಾದ ಕೃಷ್ಣ, ಶೋಭನ್​ ಬಾಬು ಮುಂತಾದವರು ವಿಷ್ಣುಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ವಿಷಯದಲ್ಲಿ ಚಿರಂಜೀವಿ ಯಾರ ಪರ ವಹಿಸುತ್ತಾರೋ ನೋಡಬೇಕಿದೆ.