ಬೆಂಗಳೂರು: ಅಕ್ಟೋಬರ್ 23ಕ್ಕೆ ‘ಕೆಜಿಎಫ್ - ಚಾಪ್ಟರ್ 2’ ಚಿತ್ರ ಬಿಡುಗಡೆ ಆಗುವುದು ನಿಜವಾ?
ಇಂಥದ್ದೊಂದು ಪ್ರಶ್ನೆ ಯಶ್ ಅಭಿಮಾನಿಗಳ ವಲಯದಲ್ಲಿ ಕೇಳಿ ಬರುತ್ತಿದೆ. ಅದಕ್ಕೆ ಕಾರಣವೂ ಇದೆ. ಪ್ರಮುಖವಾಗಿ ಚಿತ್ರದ ಚಿತ್ರೀಕರಣ ಇನ್ನೂ ಪೂರ್ತಿಯಾಗಿಲ್ಲ. ಈ ಮಧ್ಯೆ ಲಾಕ್ಡೌನ್ ಘೋಷಣೆ ಆಗಿರುವುದರಿಂದ ಸದ್ಯಕ್ಕೆ ಚಿತ್ರೀಕರಣ ಸಾಧ್ಯವಿಲ್ಲ. ಮುಂದೆ ಯಾವಾಗ ಎಂಬ ಸ್ಪಷ್ಟ ಚಿತ್ರಣವೂ ಇಲ್ಲ. ಹೀಗಿರುವಾಗ ಉಳಿದಿರುವ ಐದು ತಿಂಗಳಲ್ಲಿ ಚಿತ್ರೀಕರಣ ಸಂಪೂರ್ಣಗೊಳಿಸಿ, ಬೇರೆಲ್ಲಾ ಕೆಲಸಗಳನ್ನು ಮುಗಿಸಿ, ಹೇಳಿದ ದಿನದಂದೇ ಚಿತ್ರ ಬಿಡುಗಡೆಯಾಗುವುದು ಹೌದಾ ಎಂಬ ಪ್ರಶ್ನೆ ಸಹಜವಾಗಿಯೇ ಯಶ್ ಅವರ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಈ ಪ್ರಶ್ನೆಯನ್ನು ಮುಂದಿಟ್ಟರೆ, ಖಂಡಿತಾ ಹೇಳಿದ ದಿನಾಂಕದಂದೇ ಚಿತ್ರ ಬಿಡುಗಡೆಯಾಗುತ್ತದೆ ಎನ್ನುತ್ತಾರೆ ಚಿತ್ರದ ಕಾರ್ಯಕಾರಿ ನಿರ್ವಪಕ ಕಾರ್ತಿಕ್ ಗೌಡ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡುವ ಅವರು, ‘ಎರಡು ಫೈಟುಗಳನ್ನು ಹೊರತುಪಡಿಸಿ ಮಿಕ್ಕಂತೆ ‘ಕೆಜಿಎಫ್ - ಚಾಪ್ಟರ್ 2’ನ ಬಹುತೇಕ ಚಿತ್ರೀಕರಣ ಮುಗಿದಿದೆ. ಲಾಕ್ಡೌನ್ ಇಲ್ಲದಿದ್ದರೆ ಇಷ್ಟರಲ್ಲಿ ಮುಗಿಯಬೇಕಿತ್ತು. ಆದರೆ, ಲಾಕ್ಡೌನ್ ಇರುವುದರಿಂದ ಚಿತ್ರೀಕರಣ ಸ್ವಲ್ಪ ಮುಂದಕ್ಕೆ ಹೋಗಿದೆ. ಇನ್ನು ಕೇವಲ 20 ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಅನುಮತಿ ಸಿಕ್ಕಿರುವುದರಿಂದ, ಬೇರೆ ಕೆಲಸಗಳನ್ನು ಮೊದಲು ಮುಗಿಸಿಕೊಳ್ಳುತ್ತೇವೆ. ಜುಲೈ ಹೊತ್ತಿಗೆ ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಸಿಕ್ಕರೂ, ಆದಷ್ಟು ಬೇಗ ಮುಗಿಸಿ, ಅಂದುಕೊಂಡಂತೆಯೇ ಅಕ್ಟೋಬರ್ 23ರಂದು ಬಿಡುಗಡೆ ಮಾಡುತ್ತೇವೆ’ ಎನ್ನುತ್ತಾರೆ ಕಾರ್ತಿಕ್ ಗೌಡ.
‘ಕೆಜಿಎಫ್ - ಚಾಪ್ಟರ್ 2’ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದು, ಹೊಂಬಾಳೆ ಫಿಲಂಸ್ನಡಿ ವಿಜಯ್ಕುಮಾರ್ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ.