ಬೆಂಗಳೂರು: ಶಿವರಾಜಕುಮಾರ್ ಅಭಿನಯದ 124ನೇ ಚಿತ್ರವನ್ನು ತೆಲುಗಿನ ರಾಮ್ ಧುಲಿಪುಡಿ ನಿರ್ದೇಶಿಸುತ್ತಾರೆ, ಶಿವಣ್ಣ ಆರ್ವಿು ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕಳೆದ ಒಂದು ವರ್ಷದಿಂದ ಕೇಳಿ ಬರುತ್ತಲೇ ಇತ್ತು. ಇದೀಗ ಚಿತ್ರಕ್ಕೆ ‘ನೀ ಸಿಗೋವರೆಗೂ’ ಎಂಬ ಶೀರ್ಷಿಕೆ ಇಡಲಾಗಿದೆ. ಮಂಗಳವಾರ ಮುಹೂರ್ತವೂ ನೆರವೇರಿದ್ದು, ಮೊದಲ ದೃಶ್ಯಕ್ಕೆ ಸುದೀಪ್ ಕ್ಲಾಪ್ ಮಾಡಿದರೆ, ಗೀತಾ ಶಿವರಾಜಕುಮಾರ್ ಕ್ಯಾಮರಾ ಆನ್ ಮಾಡಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಶಿವಣ್ಣ, ‘ಮಫ್ತಿ’, ‘ಟಗರು’, ‘ದಿ ವಿಲನ್’ ಮುಂತಾದ ಆಕ್ಷನ್ ಚಿತ್ರಗಳಲ್ಲೇ ಹೆಚ್ಚಾಗಿ ನಟಿಸಿದ್ದರು. ಈಗ ಬಹಳ ದಿನಗಳ ನಂತರ ಒಂದು ಪ್ರೇಮಕಥೆಯಲ್ಲಿ ನಟಿಸುತ್ತಿದ್ದಾರೆ. ‘ಇದೊಂದು ವಿಭಿನ್ನವಾದ ಕಥೆ. ‘ಭಜರಂಗಿ 2’ ಚಿತ್ರದ ‘ನೀ ಸಿಗೋವರೆಗೂ ...’ ಹಾಡು ಚಿತ್ರಕ್ಕೆ ಸರಿಯಾಗಿದೆ ಎಂದೆನಿಸಿತು. ನಿರ್ದೇಶಕರಿಗೆ ಹೇಳಿದಾಗ, ಅವರು ಖುಷಿಯಿಂದ ಅದನ್ನೇ ಅಂತಿಮ ಮಾಡಿದ್ದಾರೆ. ಇಲ್ಲಿ ಪಾತ್ರ ಒಂದೇ ಆದರೂ, ಎರಡು ಶೇಡ್ಗಳಿವೆ. ಇಲ್ಲಿ ಆರ್ವಿು ಒಂದು ಭಾಗ ಅಷ್ಟೇ. ಮಿಕ್ಕಂತೆ, ರಾಮ್ ಬಹಳ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ ಶಿವರಾಜಕುಮಾರ್.
ಸುದೀಪ್ಗೆ ಖುಷಿ ಕೊಟ್ಟಿದ್ದು ಮತ್ತು ಈ ಚಿತ್ರದ ಮುಹೂರ್ತಕ್ಕೆ ಅತಿಥಿಯಾಗಿ ಬರುವಂತೆ ಮಾಡಿದ್ದು ‘124’ ಎಂಬ ಸಂಖ್ಯೆಯಂತೆ. ‘ಒಬ್ಬ ವ್ಯಕ್ತಿಗೆ ಶ್ರದ್ಧೆ, ಸಿನಿಮಾ ಪ್ರೀತಿ, ಶಿಸ್ತು ಇದ್ದರೆ ಈ ತರಹದ ನಂಬರ್ ಮುಟ್ಟೋದಕ್ಕೆ ಸಾಧ್ಯ. 124ನೇ ಚಿತ್ರದ ಹೊತ್ತಿಗೆ ಬಹುಶಃ ನಾವು ತಂದೆ ಪಾತ್ರ ಮಾಡ್ತೀವೇನೋ? ನನಗೆ ಈ ವಿಷಯದಲ್ಲಿ ಖುಷಿಯೂ ಇದೆ, ಬೇಸರವೂ ಇದೆ. ಖುಷಿ ಯಾಕೆ ಎಂದರೆ ಇಲ್ಲಿ ಬಂದಿರೋದು. ಬೇಸರ ಯಾಕೆ ಎಂದರೆ, ನನ್ನನ್ನು ಹಾಕಿಕೊಂಡು ಲವ್ಸ್ಟೋರಿ ಮಾಡೋದನ್ನೇ ನಿರ್ದೇಶಕರು ಬಿಟ್ಟು ಬಿಟ್ಟಿದ್ದಾರೆ. ನನ್ನ ಸಿನಿಮಾದಲ್ಲಿ ರೊಮ್ಯಾಂಟಿಕ್ ಸಾಂಗ್ ಬಂದು ಎಷ್ಟು ದಿನ ಆಯ್ತು ಅಂತ ಗೊತ್ತಿಲ್ಲ. ಹೀಗಿರುವಾಗ, ಶಿವಣ್ಣ ಈಗಲೂ ಪ್ರೇಮಕಥೆಗಳಿರುವ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಒಂದೊಂದು ಸಿನಿಮಾ ಮುಹೂರ್ತ ಆದಾಗಲೂ, ನೀವಿನ್ನೂ ನಮಗೆ ಬೇಕು ಅಂತ ಚಿತ್ರರಂಗ ಹೇಳುತ್ತಿರುತ್ತದೆ. ಹಾಗಾಗಿ, 124 ಎಂಬ ಸಂಖ್ಯೆ ದೊಡ್ಡದಲ್ಲ. ಎಲ್ಲಿಯವರೆಗೂ ನಿಮ್ಮನ್ನು ಗಮನದಲ್ಲಿಟ್ಟುಕೊಂಡು ಪಾತ್ರ ಬರೆಯುತ್ತಾರೋ, ನಿಮಗೆ ವಯಸ್ಸಾಗುವುದಕ್ಕೆ ಸಾಧ್ಯವೇ ಇಲ್ಲ’ ಎಂದರು ಸುದೀಪ್. ‘ನೀ ಸಿಗೋವರೆಗೂ’ ಚಿತ್ರದಲ್ಲಿ ಶಿವರಾಜಕುಮಾರ್ಗೆ ನಾಯಕಿಯಾಗಿ ಮೆಹ್ರೀನ್ ಪಿರ್ಜಾದಾ ನಟಿಸುತ್ತಿದ್ದಾರೆ. ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ಜತೆಯಾಗಿ ನಿರ್ವಿುಸುತ್ತಿರುವ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಸುದೀಪ್ ಇತ್ತೀಚೆಗೆ ಶಿವರಾಜಕುಮಾರ್ ಅವರಿಗೆ ಒಂದು ಕಥೆ ಹೇಳಿದರಂತೆ. ಬರೀ ಕಥೆ ಹೇಳೋದಷ್ಟೇ ಅಲ್ಲ, ಚಿತ್ರವನ್ನು ನೀವೇ ನಿರ್ದೇಶನ ಮಾಡಿ, ನಾನು ನಟಿಸುತ್ತೇನೆ ಎಂದು ಸುದೀಪ್ಗೆ ಶಿವಣ್ಣ ಬಹಿರಂಗವಾಗಿ ಆಫರ್ ನೀಡಿದರು. ಈ ಕುರಿತು ಮಾತನಾಡಿದ ಸುದೀಪ್, ‘ಇನ್ನೊಬ್ಬ ಹೀರೋ ಬಂದು ಸಿನಿಮಾ ಮಾಡೋಣ ಅಂದರೆ ಅಭದ್ರತೆ ಕಾಡುತ್ತದೆ. ಅವರೇ ನಟರಾಗಿರುವಾಗ, ನನಗೆ ಯಾಕೆ ನಿರ್ದೇಶನ ಮಾಡಬೇಕು? ಸಿನಿಮಾ ಮಾಡೋಕೆ ಬಂದಿದ್ದಾರೋ ಅಥವಾ ಹಾಳು ಮಾಡೋಕೆ ಬಂದಿದ್ದಾರಾ ಎಂಬ ಪ್ರಶ್ನೆ ಕಾಡುವುದು ಸಹಜ. ಆದರೆ, ಶಿವಣ್ಣ ನನಗೆ ಚಿತ್ರ ನಿರ್ದೇಶಿಸುವುದಕ್ಕೆ ಆಫರ್ ಕೊಟ್ಟಿದ್ದಾರೆ. ‘ಶಾಂತಿ ನಿವಾಸ’ದಲ್ಲಿ ಅವರನ್ನು ನಿರ್ದೇಶನ ಮಾಡಿದ್ದೆ. ಇನ್ನೊಮ್ಮೆ ಅವಕಾಶ ಸಿಕ್ಕಿರೆ ಖಂಡಿತಾ ಮಾಡುತ್ತೇನೆ’ ಎಂದರು.
ಡಾರ್ಲಿಂಗ್ ಅಂತ ಕರೀರಿ: ನಾಯಕಿ ಮೆಹ್ರೀನ್ ಪಿರ್ಜಾದಾ ಮಾತನಾಡುವ ಸಂದರ್ಭದಲ್ಲಿ ಶಿವರಾಜಕುಮಾರ್ಗೆ ಶಿವಣ್ಣ ಎಂದು ಕರೆದರು. ಅದಕ್ಕೆ ಸುದೀಪ್, ‘ಶಿವಣ್ಣ ಅಂತ ಕರೀಬೇಡಿ, ಡಾರ್ಲಿಂಗ್ ಎಂದು ಕರೆಯಿರಿ’ ಎಂದು ಸಲಹೆ ನೀಡಿ ಎಲ್ಲರನ್ನೂ ನಗಿಸಿದರು. ‘ಶಿವಣ್ಣ ಅಂದರೆ ಅಣ್ಣ ಅಂತ ಹೇಳಿದ ಹಾಗಾಗುತ್ತದೆ. ಇದೊಂದು ಲವ್ಸ್ಟೋರಿ. ‘ತವರಿಗೆ ಬಾ ತಂಗಿ’ ಅಲ್ಲ. ಹಾಗಾಗಿ, ಶೂಟಿಂಗ್ ಮುಗಿಯುವವರೆಗೂ ಡಾರ್ಲಿಂಗ್ ಅಂತ ಕರೀರಿ’ ಎಂದು ತಮಾಷೆ ಮಾಡಿದರು.