ಸಿನಿವಾಣಿ

ಆ. 19ಕ್ಕೆ ರೋಣ ಬರ್ತಾನಾ?; ಡಬ್ಬಿಂಗ್ ಶುರು ಮಾಡಿದ ಸುದೀಪ್

Webdesk - Ravikanth

ಬೆಂಗಳೂರು: ಆಗಸ್ಟ್ 19ರಂದು ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಬಿಡುಗಡೆ ಆಗಲಿದೆ ಎಂದು ಈ ಹಿಂದೆಯೇ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿತ್ತು. ಅದರಂತೆ ಬಹುತೇಕ ಕೊನೇ ಹಂತದ ಕೆಲಸಗಳಲ್ಲಿ ತಂಡ ನಿರತವಾಗಿದೆ. ಚಿತ್ರದ ನಾಯಕ ಸುದೀಪ್ ಸಹ ಡಬ್ಬಿಂಗ್ ಕೆಲಸ ಶುರು ಮಾಡಿದ್ದಾರೆ. ವಿಎಫ್​ಎಕ್ಸ್ ಕೆಲಸವೂ ಸಮರೋಪಾದಿಯಲ್ಲಿ ನಡೆಯುತ್ತಿದೆ. ಹಾಗಾದರೆ, ಅಂದುಕೊಂಡ ದಿನದಂದೇ ಚಿತ್ರಬಿಡುಗಡೆ ಆಗಲಿದೆಯೇ? ಸದ್ಯಕ್ಕೆ ಇದಕ್ಕೆ ಉತ್ತರ ಅಸ್ಪಷ್ಟ.

ಕರೊನಾ ಎರಡನೇ ಅಲೆಯಿಂದಾಗಿ ಮುಚ್ಚಿದ್ದ ಚಿತ್ರಮಂದಿರಗಳ ಬಾಗಿಲುಗಳು ಇನ್ನೂ ತೆರೆದಿಲ್ಲ. ಹೀಗಿರುವಾಗ ಆಗಸ್ಟ್ 19ರ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬಿಡುಗಡೆ ಆಗಬೇಕಿರುವ ‘ವಿಕ್ರಾಂತ್ ರೋಣ’, ಇಷ್ಟೊತ್ತಿಗಾಗಲೇ ಒಂದು ಹಂತದ ಪ್ರಚಾರ ಕಾರ್ಯವನ್ನು ಆರಂಭಿಸಿರಬೇಕಿತ್ತು. ಆದರೆ, ಸದ್ಯ ಅದ್ಯಾವುದೂ ನಡೆಯುತ್ತಿಲ್ಲ. ಹಾಗಾಗಿ ‘ರೋಣ’ನಿಗೂ ಮತ್ತೊಂದು ಹೊಸ ಬಿಡುಗಡೆ ದಿನಾಂಕ ಸಿಗಲಿದೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.

ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸಿದ್ಧವಾಗಿರುವ ‘ವಿಕ್ರಾಂತ್ ರೋಣ’ ಪ್ಯಾನ್ ಇಂಡಿಯಾ ಸಿನಿಮಾ. ಹಲವು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ಆಯಾ ಭಾಷೆಯ ಪೋಸ್ಟರ್​ಗಳು ಬಿಡುಗಡೆಯಾಗಿ ಎಲ್ಲ ಕಡೆಯೂ ಸದ್ದು ಮಾಡುತ್ತಿವೆ. ಸದ್ಯದ ಸ್ಥಿತಿಗತಿ ನೋಡಿದರೆ, ನಿಗದಿಯಾದ ದಿನಾಂಕಕ್ಕಿಂತ ಎರಡು ತಿಂಗಳು ಸಿನಿಮಾ ಮುಂದೂಡುವ ಸಾಧ್ಯತೆ ಇದೆ. ಅಂದರೆ, ಅಕ್ಟೋಬರ್ ನವೆಂಬರ್ ವೇಳೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಸದ್ಯ ಸಿನಿಮಾ ವಿಚಾರಕ್ಕೆ ಬರುವುದಾದರೆ, ಒಂದಷ್ಟು ಬಿಡಿ ದೃಶ್ಯಗಳ ಮತ್ತು ಹಾಡೊಂದರ ಚಿತ್ರೀಕರಣ ಮುಗಿದರೆ ‘ರೋಣ’ ರೆಡಿ. ಹಾಗಾದರೆ, ಯಾವಾಗಿನಿಂದ ಬಾಕಿ ಚಿತ್ರೀಕರಣ? ಸದ್ಯಕ್ಕೆ ಆ ಬಗ್ಗೆ ಚಿತ್ರತಂಡದಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.