‘ಕೆಜಿಎಫ್ ಚಾಪ್ಟರ್ 2’ ಬಿಡುಗಡೆಯಾಗಿ ಆರು ತಿಂಗಳುಗಳೇ ಕಳೆದಿವೆ. ಆದರೆ ಇದುವರೆಗೂ ಯಶ್ ಮುಂದಿನ ಚಿತ್ರ ಯಾವುದು ಎಂಬುದರ ಬಗ್ಗೆ ವಿಷಯ ಬಿಟ್ಟುಕೊಟ್ಟಿಲ್ಲ. ‘ಕೆಜಿಎಫ್ ಚಾಪ್ಟರ್ 3’ ಸೆಟ್ಟೇರುತ್ತಾ? ಯಶ್ ಬೇರೆ ಚಿತ್ರವನ್ನು ಒಪ್ಪಿಕೊಂಡಿದ್ದಾರಾ? ‘ಬ್ರಹ್ಮಾಸ್ತ್ರ 2’ ಚಿತ್ರದಲ್ಲಿ ನಟಿಸುತ್ತಾರಾ? ತಮಿಳು ನಿರ್ದೇಶಕ ಶಂಕರ್ ಜತೆ ಯಶ್ ಸಿನಿಮಾ ಮಾಡುತ್ತಾರಂತೆ... ಹೀಗೆ ನಾನಾ ಸುದ್ದಿಗಳು ಹರಿದಾಡಿದ್ದವು. ಈ ಎಲ್ಲ ಸುದ್ದಿಗಳಿಗು ಖುದ್ದು ಯಶ್ ಬ್ರೇಕ್ ಹಾಕಿದ್ದಾರೆ.
ಇತ್ತೀಚೆಗಷ್ಟೇ ಮಾಧ್ಯಮವೊಂದರಲ್ಲಿ ಮಾತನಾಡಿರುವ ಯಶ್, ‘ಕೆಜಿಎಫ್ 3’ ಕುರಿತು ಕೇಳಿದ ಪ್ರಶ್ನೆಗೆ, ‘ಸದ್ಯಕ್ಕಂತೂ ಇಲ್ಲ. ನಮಗೆ ಆಲೋಚನೆಯಿತ್ತು. ಆ ಬಗ್ಗೆ ಪ್ಲ್ಯಾನ್ ಕೂಡ ಇದೆ. ಆದರೆ, ನನಗೀಗ ಬೇರೆ ಏನಾದರೂ ಮಾಡಬೇಕು ಅಂತನ್ನಿಸುತ್ತಿದೆ. ಆರೇಳು ವರ್ಷ ಕೇವಲ ‘ಕೆಜಿಎಫ್’ಗಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ಸದ್ಯಕ್ಕೆ ಬ್ರೇಕ್ ಪಡೆಯಲು ಎಲ್ಲರು ತೀರ್ವನಿಸಿದ್ದೇವೆ. ಕಾಲ ಕೂಡಿ ಬಂದಾಗ ಮುಂದೆ ಆ ಚಿತ್ರ ಮಾಡುತ್ತೇವೆ. ಆದರೆ ಈಗಂತೂ ಖಂಡಿತ ಅಲ್ಲ’ ಎಂದಿದ್ದಾರೆ.
ಹೀಗೆ ಯಶ್ ‘ಕೆಜಿಎಫ್ ಚಾಪ್ಟರ್ 3’ ಬಗ್ಗೆ ಸ್ಪಷ್ಟನೆಯನ್ನೇನೋ ನೀಡಿದ್ದಾರೆ. ಹಾಗಾದರೆ ಅವರ ಮುಂದಿನ ಚಿತ್ರ ಯಾವುದು? ಯಾವಾಗ ಸೆಟ್ಟೇರಲಿದೆ? ಯಾರು ನಿರ್ದೇಶಕರು? ನಿರ್ವಿುಸುತ್ತಿರುವವರು ಯಾರು? ಎಂಬ ಹಲವು ಪ್ರಶ್ನೆಗಳಿದ್ದು, ಆ ಎಲ್ಲ ಪ್ರಶ್ನೆಗಳಿಗೆ 2023ರ ಜನವರಿ 8ರಂದು ಅವರ ಹುಟ್ಟುಹಬ್ಬದ ದಿನ ಉತ್ತರ ದೊರೆಯಲಿದೆ ಎನ್ನಲಾಗಿದೆ. - ಏಜೆನ್ಸೀಸ್