ಹೈದರಾಬಾದ್: ನಟಿ ಕಸ್ತೂರಿ ( Kasthuri Shankar ) ಅವರು 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಎಲ್ಲ ಸಿನಿರಂಗದ ಸ್ಟಾರ್ ನಟರ ಜತೆ ಕಸ್ತೂರಿ ಅಭಿನಯಿಸಿದ್ದಾರೆ. ಈಗಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಸ್ತೂರಿ ಅವರು ಸಕ್ರಿಯರಾಗಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ರಾಜಕೀಯ ಹಾಗೂ ಸಿನಿಮಾ ಸೇರಿದಂತೆ ಸಮಾಜದಲ್ಲಿ ನಡೆಯುವ ಕೆಲ ಘಟನೆಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಅವರು ಎಂದಿಗೂ ದೂರ ಉಳಿಯುವುದಿಲ್ಲ.
ಕಸ್ತೂರಿ ಅವರು ನಿರೂಪಕಿ ಮತ್ತು ನ್ಯೂಸ್ ರೀಡರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದಾದ ನಂತರ ನಾಯಕಿಯಾಗಿ ಬಣ್ಣದ ಜಗತ್ತನ್ನು ಪ್ರವೇಶಿಸಿದರು. ಕಾಲಕಾಲಕ್ಕೆ ವಿವಾದಗಳಲ್ಲಿ ಸಿಲುಕುವ ಮೂಲಕ ಹೆಚ್ಚು ಹೆಚ್ಚು ವೈರಲ್ ಆಗುತ್ತಲೇ ಇರುತ್ತದೆ. ಈ ಹಿಂದೆ ತಮಿಳಿಗರ ಭಾವನೆಗೆ ಧಕ್ಕೆಯಾಗುವಂತೆ ಮಾತನಾಡಿ ಜೈಲು ಪಾಲಾಗಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದರು. ಇತ್ತೀಚೆಗೆ, ಕಸ್ತೂರಿ ಅವರು ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹೇಳಿದ್ದಾರೆ.
ನಾನು ನನ್ನ ವೃತ್ತಿಜೀವನವನ್ನು ಆ್ಯಂಕರ್ ಆಗಿ ಪ್ರಾರಂಭಿಸಿದೆ. ನಾನು ಕಾಲೇಜಿನಲ್ಲಿ ಓದುತ್ತಿರುವಾಗಲೇ ಆ್ಯಂಕರಿಂಗ್ ಮಾಡುತ್ತಿದ್ದೆ. ಆರಂಭದಲ್ಲಿ, ನಾನು ಹೆಚ್ಚಾಗಿ ಕಾರ್ಪೊರೇಟ್ ಈವೆಂಟ್‌ಗಳನ್ನು ಮಾಡುತ್ತಿದ್ದೆ. ಹೀಗಿರುವಾಗ ಒಂದು ಕಾರ್ಯಕ್ರಮದಲ್ಲಿ ನಾಗಾರ್ಜುನ ಅವರ ಪರಿಚಯವಾಯಿತು. ಅವರು ಆಗಲೇ ಸ್ಟಾರ್ ನಟರಾಗಿದ್ದರು. ಆ ಕಾರ್ಯಕ್ರಮದಲ್ಲಿ ನನ್ನೊಂದಿಗೆ ಮಾತನಾಡಿದರು. ಅಲ್ಲದೆ, ನನ್ನ ಕೈ ಕುಲುಕಿದರು. ಈ ವೇಳೆ ನಾನು ಎರಡು ದಿನಗಳವರೆಗೆ ನನ್ನ ಕೈ ತೊಳೆಯಲಿಲ್ಲ. ನಾಗಾರ್ಜುನ ಅವರೇ ನನ್ನ ಕೈ ಕುಲುಕಿದರು ಎಂದು ನಾನು ಎಲ್ಲರಿಗೂ ಹೇಳಿಕೊಂಡು ಸುತ್ತಾಡಿದೆ. ಇದನ್ನು ಕೇಳಿ ನನ್ನ ಸಹಪಾಠಿಗಳು ಅಸೂಯೆ ಪಟ್ಟರು. ಹದಿಹರೆಯದಲ್ಲಿ ಆ ರೀತಿಯ ಸಂತೋಷವೇ ಬೇರೆ ಎಂದು ಕಸ್ತೂರಿ ಹೇಳಿದ್ದಾರೆ.
ತುಂಬಾ ದಿನಗಳ ಬಳಿಕ ನಾನು ಅನ್ನಮಯ್ಯ ಸಿನಿಮಾ ಸೆಟ್ನಲ್ಲಿ ಅವರನ್ನು ಭೇಟಿಯಾಗಿ ಆ ಚಿತ್ರದಲ್ಲಿ ನಟಿಸಿದಾಗ, ನನ್ನ ಕನಸು ನನಸಾದಂತೆ ಭಾಸವಾಯಿತು. ಅವರನ್ನು ಭೇಟಿಯಾಗಿ ಬಹಳ ದಿನಗಳಾಗಿವೆ. ಅವರನ್ನು ಮತ್ತೆ ಭೇಟಿಯಾಗಲು ನನಗೆ ಏನಾದರೂ ನೆಪ ಹುಡುಕಬೇಕು. ನಾನು ಮತ್ತೆ ನಾಗಾರ್ಜುನ ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ. ಆ ಸಮಯದಲ್ಲಿ, ನಾವು ಅವರನ್ನು ಓರ್ವ ಮಹಾನ್ ನಾಯಕನಾಗಿ ನೋಡಿದ್ದೇವೆ ಆದರೆ, ಈಗಿನ ಪೀಳಿಗೆಯು ಅವರನ್ನು ಖಳನಾಯಕನಾಗಿಯೂ ನೋಡುತ್ತಿದೆ ಎಂದರು ಕಸ್ತೂರಿ ಹೇಳಿದರು. ನಾಗಾರ್ಜುನ ಅವರು ರಜನಿಕಾಂತ್ ಅವರ ಕೂಲಿ ಚಿತ್ರದಲ್ಲಿ ಸ್ಟೈಲಿಶ್ ಖಳನಾಯಕನಾಗಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಅಂದಹಾಗೆ, ಕಸ್ತೂರಿ ಅವರಿಗೆ ವಯಸ್ಸು 49 ಆದರೂ ಗ್ಲಾಮರ್ ಪ್ರದರ್ಶನ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಹೃದಯದ ಬಡಿತವನ್ನು ಹೆಚ್ಚಿಸುತ್ತಿರುತ್ತಾರೆ. ಪ್ರಸ್ತುತ ಕಸ್ತೂರಿ ಶಂಕರ್ ಅವರು ತಮಿಳಿನ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಬಿಜಿಯಾಗಿದ್ದಾರೆ. ಇವರು ಕನ್ನಡದಲ್ಲಿ ಜಾಣ, ಹಬ್ಬ ಹಾಗೂ ತುತ್ತಾ ಮುತ್ತಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. (ಏಜೆನ್ಸೀಸ್)