Rajinikanth: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರೊಂದಿಗಿನ ತಮ್ಮ ಭಿನ್ನಾಭಿಪ್ರಾಯದ ಹಿಂದಿನ ಕಾರಣವನ್ನು ಸೂಪರ್‌ಸ್ಟಾರ್ ರಜನಿಕಾಂತ್ ಇದೀಗ ಬಹಿರಂಗಪಡಿಸಿದ್ದಾರೆ. ಮಾಜಿ ಸಚಿವ ಮತ್ತು ಚಲನಚಿತ್ರ ನಿರ್ಮಾಪಕ ಆರ್.ಎಂ. ವೀರಪ್ಪನ್ (ಆರ್‌ಎಂವಿ) ಅವರ ಮೊದಲ ಪುಣ್ಯತಿಥಿಯಂದು ಬಿಡುಗಡೆಯಾದ ಸಾಕ್ಷ್ಯಚಿತ್ರದಲ್ಲಿ ರಜನಿಕಾಂತ್ ಅವರು ಅನೇಕ ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
1995ರಲ್ಲಿ ಆಗಿನ ಸಚಿವ ಆರ್.ಎಂ. ವೀರಪ್ಪನ್ ನಿರ್ಮಿಸಿದ ಮತ್ತು ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ ಸೂಪರ್‌ಹಿಟ್ ಚಿತ್ರ ಬಾಷಾದ 100 ದಿನಗಳ ಪ್ರದರ್ಶನದ ಸಂಭ್ರಮಾಚರಣೆಯ ವೇದಿಕೆಯಲ್ಲಿ ರಜಿನಿಕಾಂತ್ ಮಾಡಿದ ಆ ಒಂದು ಭಾಷಣದಿಂದ ಜಯಲಲಿತಾ ತುಂಬಾ ಕೋಪಗೊಂಡಿದ್ದರು.
ವೇದಿಕೆಯಲ್ಲಿ ಮಾತನಾಡಿದ್ದ ರಜಿನಿಕಾಂತ್, ತಮಿಳುನಾಡಿನಲ್ಲಿ ಬಾಂಬ್ ಸಂಸ್ಕೃತಿ ಇದೆ ಎಂಬ ಹೇಳಿಕೆ ನೀಡಿದ್ದರು. ಆ ಸಂದರ್ಭದಲ್ಲಿ ನಿರ್ದೇಶಕ ಮಣಿರತ್ನಂ ಅವರ ಮನೆಯ ಮೇಲೆ ಬಾಂಬ್ ದಾಳಿ ನಡೆದಿತ್ತು. ಅದನ್ನು ಉಲ್ಲೇಖಿಸಿ ರಜಿನಿ ಆ ಹೇಳಿಕೆಯನ್ನು ನೀಡಿದ್ದರು. ಅದೇ ಸಮಯದಲ್ಲಿ ವೇದಿಕೆಯಲ್ಲಿದ್ದ ಮತ್ತು ರಜಿನಿ ಹೇಳಿಕೆಗೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸದ ವೀರಪ್ಪನ್ ಅವರನ್ನು ಜಯಲಲಿತಾ ಅವರು ಸಂಪುಟದಿಂದ ತೆಗೆದುಹಾಕಿದರು.
ಸಚಿವರು ವೇದಿಕೆಯಲ್ಲಿದ್ದಾಗ ನಾನು ಹಾಗೆ ಮಾತನಾಡಬಾರದಿತ್ತು. ಆ ಸಮಯದಲ್ಲಿ ಅದು ನನಗೆ ತಿಳಿದಿರಲಿಲ್ಲ ಎಂದು ರಜಿನಿಕಾಂತ್ ಹೇಳಿದ್ದಾರೆ. ಈ ಘಟನೆಯಿಂದ ಚಿಂತೆಗೆ ಒಳಗಾದೆ. ಸ್ವಲ್ಪ ಸಮಯದವರೆಗೆ ನಿದ್ರೆ ಮಾಡಲು ಸಹ ಆಗುತ್ತಿರಲಿಲ್ಲ. ಅಷ್ಟೊಂದು ಕಾಡುತ್ತಿತ್ತು. ಇಂದಿಗೂ ಆ ನೋವು ಕಾಡುತ್ತಲೇ ಇದೆ. ಈ ವಿಚಾರದ ಬಗ್ಗೆ ಅಂದು ಜಯಲಲಿತಾ ಅವರೊಂದಿಗೆ ಮಾತನಾಡಲು ಯೋಚಿಸಿದ್ದೆ, ಆದರೆ ವೀರಪ್ಪನ್ ಅವರೇ ನನ್ನನ್ನು ತಡೆದರು ಎಂದು ರಜನಿಕಾಂತ್ ಹೇಳಿದ್ದಾರೆ.
ಆ ರಾತ್ರಿ ನನಗೆ ನಿದ್ರೆ ಬರಲಿಲ್ಲ ಮತ್ತು ಆರ್‌ಎಂವಿಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಮರುದಿನ ಬೆಳಗ್ಗೆ ನಾನು ಆರ್‌ಎಂವಿಗೆ ಕರೆ ಮಾಡಿ ಕ್ಷಮೆಯಾಚಿಸಿದೆ. ಆದರೆ, ಸಚಿವರು ಅದನ್ನು ಲಘುವಾಗಿ ತಳ್ಳಿಹಾಕಿದರು ಮತ್ತು ಅದನ್ನು ಮರೆತುಬಿಡಿ ಎಂದು ಹೇಳಿದರು. ಇದೆಲ್ಲದರ ಬದಲಾಗಿ ಸಿನಿಮಾ ಶೂಟಿಂಗ್ ಶೆಡ್ಯೂಲ್ ಬಗ್ಗೆ ಬಗ್ಗೆ ಕೇಳಿದರು. ಏನೂ ಆಗೇ ಇಲ್ಲ ಎಂಬಂತೆ ನನ್ನೊಂದಿಗೆ ವರ್ತಿಸಿದರು ಎಂದು ರಜನಿಕಾಂತ್ ಹೇಳಿದ್ದಾರೆ. ಈ ಘಟನೆಯು ಒಂದು ಗಾಯವಾಗಿ ಮಾರ್ಪಟ್ಟಿತು ಎಂದು ರಜಿನಿ ತಿಳಿಸಿದ್ದಾರೆ.
ನಾನು ಈ ವಿಚಾರದ ಬಗ್ಗೆ ಮುಖ್ಯಮಂತ್ರಿಯ ಜತೆ ಮಾತನಾಡಬಹುದೇ ಎಂದು ಕೇಳಿದೆ. ಆದರೆ, ವೀರಪ್ಪನ್ ಅವರು ನನ್ನನ್ನು ತಡೆದರು. ನೀವು ಎಷ್ಟೇ ಹೇಳಿದರೂ ಅವರು ಮಾತ್ರ ತಮ್ಮ ನಿರ್ಧಾರವನ್ನು ಬದಲಾಯಿಸುವುದಿಲ್ಲ. ಸುಮ್ಮನೇ ನಿಮ್ಮ ಹೆಸರನ್ನು ಹಾಳು ಮಾಡಿಕೊಳ್ಳಬೇಡಿ. ಅಲ್ಲದೆ, ನೀವು ಅವರೊಂದಿಗೆ ಮಾತನಾಡಿದ ನಂತರ ನಾನು ಮತ್ತೆ ಸಚಿವನಾಗುವ ಅಗತ್ಯವಿಲ್ಲ ಎಂದು ವೀರಪ್ಪನ್ ಹೇಳಿದರು. ಅದಕ್ಕಾಗಿಯೇ ಅವರು ಒಬ್ಬ ಮಹಾನ್ ವ್ಯಕ್ತಿಯಾದರು ಮತ್ತು ನಿಜವಾದ ಕಿಂಗ್‌ಮೇಕರ್ ಆದರು ಎಂದು ರಜನಿಕಾಂತ್ ಹೇಳಿದ್ದಾರೆ.
ಆ ದಿನ ವೇದಿಕೆಯಲ್ಲಿ ಕೊನೆಯದಾಗಿ ಮಾತನಾಡಿದವನು ನಾನೇ. ಹೀಗಾಗಿ ಆ ಬಗ್ಗೆ ಪ್ರತಿಕ್ರಿಯಿಸಲು ವೀರಪ್ಪನ್ ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಆ ಘಟನೆ ಎಂದಿಗೂ ಗುಣವಾಗದ ಗಾಯವಾಗಿ ಉಳಿದಿದೆ. ಜಯಲಲಿತಾ ಅವರನ್ನು ರಾಜಕೀಯವಾಗಿ ವಿರೋಧಿಸುವ ನಿರ್ಧಾರದ ಹಿಂದೆ ಹಲವಾರು ಕಾರಣಗಳಿವೆ ಎಂದು ರಜನಿಕಾಂತ್ ಇದೇ ಸಂದರ್ಭದಲ್ಲಿ ಹೇಳಿದರು. (ಏಜೆನ್ಸೀಸ್)