ನಿರ್ದೇಶಕ ಆದಿತ್ಯ ಧರ್ ಹಾಗೂ ರಣ್‌ವೀರ್ ಸಿಂಗ್ ಅವರ ಬಹುನಿರೀಕ್ಷಿತ 'ಧುರಂಧರ್' ಸಿನಿಮಾ ಆಸ್ಕರ್ ರೇಸ್‌ನಿಂದ ಹೊರಬಿದ್ದ ಕುರಿತು ಚರ್ಚೆ 
ಸಿನಿವಾಣಿ

'ಧುರಂಧರ್​' ಆಸ್ಕರ್​ ರೇಸ್​ನಿಂದ ಹೊರಗುಳಿಯಲು ಕಾರಣವೇನು? ನಿರ್ದೇಶಕ ಆದಿತ್ಯ ಧರ್​ ನೀಡಿದ ಅಚ್ಚರಿ ಹೇಳಿಕೆ ಇಲ್ಲಿದೆ...!​ Aditya Dhar

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡರೂ ರಣ್‌ವೀರ್ ಸಿಂಗ್ ಅಭಿನಯದ 'ಧುರಂಧರ್' ಸಿನಿಮಾ ಆಸ್ಕರ್ ರೇಸ್‌ನಿಂದ ಹೊರಗುಳಿಯಲು ಅಚ್ಚರಿಯ ಕಾರಣ ಬಹಿರಂಗ. ಸಂಪೂರ್ಣ ವಿವರ ಇಲ್ಲಿದೆ.

ಗುಜರಾತ್​: ಮಂಗಳವಾರ (ಸೆ.22) ಗುಜರಾತಿನ ಕೆವಾಡಿಯಾದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಡೆಸಲಾಗಿದ್ದು, ಈ ಭಾರಿ ಕಾರ್ಯಕ್ರಮವು ಹಿಂದಿನ ಸಲಕ್ಕಿಂತ ಅದ್ದೂರಿಯಾಗಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಈ ಸಂದರ್ಭದಲ್ಲಿ ಕನ್ನಡದ ಹಿರಿಯ ನಟ ಅನಂತ ನಾಗ್​ ಅವರಿಗೆ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ನೀಡಲಾಗಿದ್ದು, ಇದೇ ವೇದಿಕೆಯಲ್ಲಿ ಮಮ್ಮಟ್ಟಿ, ಕಾರ್ತಿಕ್​ ಆರ್ಯನ್​ ಹಾಗೂ ಯಾಮಿ ಗೌತಮ್​ಗೆ ಅತ್ಯುತ್ತಮ ನಟ-ನಟಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಯಾಮಿ ಗೌತಮ್​ ಪತಿ ಹಾಗೂ ನಿರ್ದೇಶಕ ಆದಿತ್ಯ ಧರ್ (Aditya Dhar)​​, ಮುಂದಿನ ಸಲ ಕೂಡ ತಮ್ಮ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸುವ ನಂಬಿಕೆಯಿದೆ ಎಂದಿದ್ದಾರೆ.

ಧುರಂಧರ್​ ಆಸ್ಕರ್​ಗೆ ಏಕೆ ತಲುಪಿಲ್ಲ?

ಈ ಸಂದರ್ಭದಲ್ಲಿ ಆದಿತ್ಯ ಧರ್​ನನ್ನು ಸುತ್ತುವರಿದ ಮಾಧ್ಯಮದವರು, ಕೆಲ ದಿನಗಳ ಹಿಂದೆ ಆಸ್ಕರ್​ಗೆ ಆಯ್ಕೆಯಾದ ಸಿನಿಮಾಗಳ ಪಟ್ಟಿ ಹೊರಬಿದ್ದಿದ್ದು, ಭಾರತದ ಚಿತ್ರರಂಗದಲ್ಲಿ ಇತಿಹಾಸವನ್ನು ನಿರ್ಮಿಸಿದ್ದ ಧುರಂಧರ್​ ಸಿನಿಮಾ ಏಕೆ ಆಸ್ಕರ್​ಗೆ ಆಯ್ಕೆಯಾಗಿಲ್ಲ ಎಂದು ನಿರ್ದೇಶಕ ಆದಿತ್ಯ ಧರ್​ನನ್ನು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಧರ್​, ನಾವಿಂದು ನಮ್ಮ ಆರ್ಟಿಕಲ್​ 370 ಸಿನಿಮಾಗೆ ದೊರೆತಿರುವ ಪ್ರಶಸ್ತಿಯನ್ನು ಪಡೆಯಲು ಬಂದಿದ್ದೇವೆ. ಇವತ್ತು ಈ ಸಿನಿಮಾ ಬಗ್ಗೆ ಮಾತನಾಡುವಾ, ಮುಂದಿನ ವರ್ಷ ಧುರಂಧರ್​ ರಾಷ್ಟ್ರೀಯ ಪ್ರಶಸ್ತಿ ರೇಸ್​​ನಲ್ಲಿದ್ದು, ಪ್ರಶಸ್ತಿ ದೊರೆಯುವ ವಿಶ್ವಾಸವಿದೆ. ಅದರ ಬಗ್ಗೆ ಮುಂದಿನ ಬಾರಿ ಮಾತನಾಡುವಾ ಎಂದು ಉತ್ತರಿಸಿದ್ದಾರೆ.

ಅನಂತ ನಾಗ್​​ಗೆ ದಾದಾ ಸಾಹೇಬ್​!

ಕನ್ನಡ, ಹಿಂದಿ, ಮರಾಠಿ ಸೇರಿದಂತೆ ಸುಮಾರು 300 ಕ್ಕೂ ಅಧಿಕ ಸಿನಿಮಾಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಸ್ಯಾಂಡಲ್​ವುಡ್​ ನಟ ಕನ್ನಡನಾಡಿನ ಹಿರಿಮೆ, ಹೆಮ್ಮೆಯಾದ ಅನಂತ​ ನಾಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಿನಿಮಾ ರಂಗದ ಸೇವೆಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್​ ಫಾಲ್ಕೆಯನ್ನು ನೀಡಿ ಗೌರವಿಸಿದ್ದಾರೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅನಂತ ನಾಗ್​, ಈ ಕಾರ್ಯಕ್ರಮದ ಹಿರಿಮೆಯನ್ನು ಸೆರೆಹಿಡಿಯಲು ನಾನು ಪ್ರಯತ್ನಿಸುತ್ತಿದ್ದೇನೆ. ಇಂದು ಇಲ್ಲಿಗೆ ಬಂದಿರುವುದು ನನಗೆ ತುಂಬಾ ಸಂತೋಷ ತಂದಿದೆ. ನಾನು ಆಶ್ರಮದಲ್ಲಿ ಬೆಳೆದವನು. ನನ್ನ ಬಾಲ್ಯದ 12 ವರ್ಷ ವಯಸ್ಸಿನವರೆಗೂ ಅಲ್ಲಿಯೇ ಇದ್ದೆ. ಮುಂಬೈನಲ್ಲಿ ನನಗೆ ನಾಟಕದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈ ಸಂದರ್ಭದಲ್ಲಿ ನಾನು ಶ್ರೀ ಆದಿ ಶಂಕರಾಚಾರ್ಯರ ಸಾಲುಗಳನ್ನು ಉಲ್ಲೇಖಿಸಲು ಬಯಸುತ್ತೇನೆ. ಭಾರತ ನನ್ನ ಜನ್ಮಭೂಮಿ, ಕರ್ನಾಟಕವೇ ನನ್ನ ಕರ್ಮಭೂಮಿ, ಭಾರತವೂ ನನ್ನ ಧರ್ಮಭೂಮಿ’’ ಎಂದು ಹೇಳಿದ್ದಾರೆ.

ಮಮ್ಮುಟ್ಟಿ, ಕಾರ್ತಿಕ್​, ಯಾಮಿಗೆ ರಾಷ್ಟ್ರೀಯ ಪ್ರಶಸ್ತಿ!

ಬ್ರಹ್ಮಯುಗಂ ಸಿನಿಮಾದ ನಟನೆಗಾಗಿ ಮಳಿಯಾಳಂ ನಟ ಮಮ್ಮುಟ್ಟಿಗೆ ಹಾಗೂ ಚಂದು ಚಾಂಪಿಯನ್ ಸಿಮಾಗಾಗಿ ಕಾರ್ತಿಕ್​ ಆರ್ಯನ್​ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದರೆ, ಆರ್ಟಿಕಲ್​ 370 ಸಿನಿಮಾದ ಅಭಿನಯಕ್ಕೆ ನಿರ್ದೇಶಕ ಆದಿತ್ಯ ಧರ್​ ಪತ್ನಿ ಯಾಮಿ ಗೌತಮ್​ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ, (ಏಜೆನ್ಸೀಸ್).