

ಗುಜರಾತ್: 72 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ (72nd National Film Awards) ಕಾರ್ಯಕ್ರಮವು ಪ್ರಥಮ ಬಾರಿಗೆ ಗುಜರಾತಿನಲ್ಲಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ದಾದಾ ಸಾಹೇಬ್ ಫಾಲ್ಕೆ ಜೊತೆಗೆ, ಬ್ರಹ್ಮಯುಗಂ ಸಿನಿಮಾದ ನಟನೆಗಾಗಿ ಮಳಿಯಾಳಂ ನಟ ಮಮ್ಮುಟ್ಟಿಗೆ ಹಾಗೂ ಚಂದು ಚಾಂಪಿಯನ್ ಸಿಮಾಗಾಗಿ ಕಾರ್ತಿಕ್ ಆರ್ಯನ್ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದರೆ, ಆರ್ಟಿಕಲ್ 370 ಸಿನಿಮಾದ ಅಭಿನಯಕ್ಕೆ ನಿರ್ದೇಶಕ ಆದಿತ್ಯ ಧರ್ ಪತ್ನಿ ಯಾಮಿ ಗೌತಮ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
72 ನೇ ಸಾಲಿನ ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ ಪ್ರಶಸ್ತಿಯನ್ನು ವೀರ್ ಸಾವರ್ಕರ್ ಸಿನಿಮಾಗೆ ರಣದೀಪ್ ಹೂಡಾ ಅವರಿಗೆ ಲಭಿಸಿದೆ. ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ ವಿಭಾಗದಲ್ಲಿ ಪ್ರಭಾಸ್ ನಟಿಸಿದ್ದ ಕಲ್ಕಿ 2898 ಎಡಿ ಸಿನಿಮಾ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಹಿಂದಿ ನಟ ರಾಜಕುಮಾರ್ ರಾವ್ ನಟನೆಯ ಶ್ರೀಕಾಂತ್ ಸಿನಿಮಾಗೆ ಅತ್ಯುತ್ತಮ ಹಿಂದಿ ಭಾಷಾ ಸಿನಿಮಾ ಎಂಬ ಪ್ರಶಸ್ತಿ ಲಭಿಸಿದೆ.
ಕನ್ನಡ ವಿಭಾಗದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಪರಂವಾ ಸ್ಟುಡಿಯೋಸ್ ನಿರ್ಮಾಣದ, ಸುಮಂತ್ ಭಟ್ ನಿರ್ದೇಶನದ ಮಿಥ್ಯ ಎಂಬ ಸಿನಿಮಾ ಅತ್ಯುತ್ತಮ ಕನ್ನಡ ಸಿನಿಮಾ ಎಂಬ ಪ್ರಶಸ್ತಿಯನ್ನು ಪಡೆದಿದೆ. ಇದರ ಜೊತೆಗೆ ಇತರೆ ಎರಡು ರಾಷ್ಟ್ರಪ್ರಶಸ್ತಿಗಳು ಈ ಚಿತ್ರಕ್ಕೆ ಲಭಿಸಿದೆ. ಅತ್ಯುತ್ತಮ ಸಿನಿಮಾ ಜೊತೆಗೆ ಅತ್ಯುತ್ತಮ ಬಾಲ ನಟ ವಿಭಾಗದಲ್ಲಿ ಆತೀಶ್ ಶೆಟ್ಟಿ ಹಾಗೂ ಅತ್ಯುತ್ತಮ ನಟಿ (ಪೋಷಕ ಪಾತ್ರ) ವಿಭಾಗದಲ್ಲಿ ರೂಪಶ್ರಿ ವರ್ಕಾಡಿ ರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕನ್ನಡ, ಹಿಂದಿ, ಮರಾಠಿ ಸೇರಿದಂತೆ ಸುಮಾರು 300 ಕ್ಕೂ ಅಧಿಕ ಸಿನಿಮಾಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಸ್ಯಾಂಡಲ್ವುಡ್ ನಟ ಕನ್ನಡನಾಡಿನ ಹಿರಿಮೆ, ಹೆಮ್ಮೆಯಾದ ಅನಂತ ನಾಗ್ ಅವರಿಗೆ ಕಳೆದ ಕೆಲ ದಿನಗಳ ಹಿಂದಷ್ಟ ಪ್ರತಿಷ್ಟಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಲಾಗಿತ್ತು.
ಬುಧವಾರ (ಸೆ.16) ಪ್ರೆಸ್ ಇನ್ಫಾರ್ಮೇಶನ್ ಬ್ಯೂರೊ ಈ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದು, ಸೆಪ್ಟೆಂಬರ್ನಲ್ಲಿ ಗುಜರಾತಿನಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರತಿಷ್ಟಿತ ಪ್ರಶಸ್ತಿಯನ್ನು ಅನಂತ ನಾಗ್ ಅವರಿಗೆ ನೀಡಲಾಗುತ್ತದೆ ಎಂದು ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು, (ಏಜೆನ್ಸೀಸ್).