ಚೆನ್ನೈ: ಪ್ರಖ್ಯಾತ ಕಿರುತೆರೆ ಕಲಾವಿದೆ ಹಾಗೂ ವಿಡಿಯೋ ಜಾಕಿ ಚಿತ್ರಾರ ಹಠಾತ್ ನಿಧನದಿಂದ ಪಾಲಕರು, ಸ್ನೇಹಿತರು, ಅಭಿಮಾನಿಗಳು ಹಾಗೂ ಸಹೋದ್ಯೋಗಿಗಳು ಶಾಕ್ಗೆ ಒಳಗಾಗಿದ್ದಾರೆ. ಇದರ ಬೆನ್ನಲ್ಲೇ ಚಿತ್ರಾ ಸಾವಿನಲ್ಲಿ ಏನೋ ಮೋಸದಾಟ ನಡೆದಿದೆ ಎಂದು ಅವರ ಸ್ನೇಹಿತರು ಮತ್ತು ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.
ಬುಧವಾರ ಬೆಳಗ್ಗೆ ಚೆನ್ನೈನ ನಜರತ್‌ಪೇಟೆಯ ಹೋಟೆಲ್ನಲ್ಲಿ ಚಿತ್ರಾ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸದ್ಯಕ್ಕೆ ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು, ಹಿರಿಯ ಅಧಿಕಾರಿಯೊಬ್ಬರು ತನಿಖೆಯ ನೇತೃತ್ವ ವಹಿಸಿದ್ದಾರೆ.
ಚಿತ್ರಾ ಅವರ ಭಾವಿ ಪತಿ ಹೇಮಂತ್ ಸಹ ಚಿತ್ರಾ ಜತೆ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು. ಈ ಬಗ್ಗೆ ಮಾತನಾಡಿರುವ ಅವರು ಸಾಯುವ ಮುನ್ನ ನಾನು ರೂಮ್ ಹೊರಗೆ ಕಾಯುತ್ತಿದ್ದೆ. ಸ್ನಾನ ಮಾಡಬೇಕಾಗಿರುವುದಿಂದ ಹೊರಗಿರುವಂತೆ ಹೇಳಿದ್ದಳು. ಆದರೆ, ತುಂಬಾ ಹೊತ್ತದಾರೂ ಬಾಗಿಲು ತೆರೆಯದಿದ್ದಾಗ ಹೋಟೆಲ್ ಸಿಬ್ಬಂದಿಗೆ ಎಚ್ಚರಿಸಿದೆ. ಬಳಿಕ ಸಿಬ್ಬಂದಿ ನಕಲಿ ಕೀ ಸಹಾಯದಿಂದ ಬಾಗಿಲು ತೆಗೆದು ನೋಡಿದಾಗ ಚಿತ್ರಾ ಮೃತಪಟ್ಟಿದ್ದಳು. ಬಳಿಕ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದೆವು ಎಂದಿದ್ದಾರೆ.
ಇನ್ನು ಚಿತ್ರಾ ಅವರ ತಂದೆ ನಿವೃತ್ತ ಪೊಲೀಸ್ ಆಗಿದ್ದು, ನಜರತ್ಪೇಟೆಯಲ್ಲಿ ದೂರು ದಾಖಲಿಸಿದ್ದಾರೆ. ಚಿತ್ರಾ ಸಾವಿನ ಬಗ್ಗೆ ನಮಗೆ ಸಂಶಯವಿದೆ ಎಂದು ಆಕೆಯ ಕುಟುಂಬಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದು ತನಿಖೆ ನಡೆಸಲು ಮನವಿ ಮಾಡಿದ್ದಾರೆ. ತನಿಖೆಯ ಭಾಗವಾಗಿ ಪಸ್ತುತ ಪೊಲೀಸರು ಹೇಮಂತ್ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಹೇಮಂತ್ ಮತ್ತು ಚಿತ್ರಾ ಕಳೆದ ಆಗಸ್ಟ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜನವರಿಯಲ್ಲಿ ಇಬ್ಬರ ಮದುವೆಗೆ ದಿನಾಂಕ ನಿಗದಿಯಾಗಿತ್ತು. ಎರಡು ತಿಂಗಳ ಹಿಂದೆ ಅಂದರೆ ಅಕ್ಟೋಬರ್ 19ರಂದು ಇಬ್ಬರು ಸರಳವಾಗಿ ರಿಜಿಸ್ಟರ್ ಮದುವೆಯಾಗಿದ್ದರಂತೆ. ಇದೀಗ ಚಿತ್ರಾ ಸಾವಿನ ಸುತ್ತಾ ಸಾಕಷ್ಟು ಅನುಮಾನಗಳು ಎದ್ದಿದ್ದು, ಪೊಲೀಸರು ಆಕೆಯ ಫೋನ್ ರೆಕಾರ್ಡ್ಗಳ ಮೊರೆ ಹೋಗಿದ್ದಾರೆ.
ಇದಲ್ಲದೆ, ಕೆಲವು ಖಚಿತವಲ್ಲದ ಮೂಲಗಳು ಹೇಳುವ ಪ್ರಕಾರ ಚಿತ್ರಾ ಅವರ ಮುಖದ ಮೇಲೆ ಗಾಯದ ಕಲೆಗಳಾಗಿದ್ದವಂತೆ. ಇತ್ತ ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಅವಳು ತುಂಬಾ ಬೋಲ್ಡ್ ಆಗಿದ್ದಳು. ಏನೋ ಮೋಸದಾಟ ನಡೆದಿದೆ ಎಂದು ಚಿತ್ರಾ ತಾಯಿ ಕಣ್ಣೀರಿಟ್ಟಿದ್ದಾರೆ. (ಏಜೆನ್ಸೀಸ್)