ಕಳೆದ ಎರಡು ದಿನಗಳಿಂದ ಬಾಲಿವುಡ್ ನಿಜಕ್ಕೂ ಕಳಾಹೀನವಾಗಿದೆ. ಖ್ಯಾತ ನಾಮ ಇಬ್ಬರು ಕಲಾವಿದರನ್ನು ಕಳೆದುಕೊಂಡು ಭಾರತೀಯ ಚಿತ್ರರಂಗ ಬಡವಾಗಿದೆ. ಬುಧವಾರ ಇರ್ಫಾನ್ ಖಾನ್ ಸಾವನ್ನಪ್ಪಿದರೆ, ಗುರುವಾರ ರಿಷಿ ಕಪೂರ್ ಕೊನೆಯುಸಿರೆಳೆದರು. ಇವೆರಡು ದುರಂತ ಸುದ್ದಿಗಳ ನಡುವೆ ಬಾಲಿವುಡ್ನಿಂದ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಂದಿತ್ತು. ಆದರೆ, ಆ ಸುದ್ದಿ ಸುಳ್ಳು ಎಂಬುದು ಗೊತ್ತಾಗುತ್ತಿದ್ದಂತೆ ಸಿನಿಲೋಕ ನಿಟ್ಟುಸಿರು ಬಿಟ್ಟಿತ್ತು.
ಹೌದು, ಬಾಲಿವುಡ್ ಕಂಡ ಅದ್ಭುತ ನಟ ನಾಸೀರುದ್ದೀನ್ ಷಾ ವಯಸ್ಸಹಜ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಿರುವಾಗ ಅವರ ಆರೋಗ್ಯದಲ್ಲೂ ಏರುಪೇರು ಕಂಡುಬಂದಿದೆ ಎಂಬ ಸುದ್ದಿ ಸಿನಿಮಾ ಪ್ರೇಮಿಗಳ ನಿದ್ದೆಗೆಡಿಸಿತ್ತು. ಅದೃಷ್ಟವಶಾತ್ ನಾಸೀರುದ್ದೀನ್ ಆರೋಗ್ಯ ಸ್ಥಿರವಾಗಿದೆ ಎಂದು ನಾಸೀರ್ ಪುತ್ರ ವಿವಾನ್ ಷಾ ಸ್ಪಷ್ಟಪಡಿಸಿದ್ದಾರೆ.
‘ಅಪ್ಪ ಆರೋಗ್ಯವಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಇಲ್ಲಸಲ್ಲದ ಸುದ್ದಿಗಳು ಹರಿದಾಡುತ್ತಿವೆ. ಅವೆಲ್ಲವೂ ಸುಳ್ಳು!’ ಎಂದಿದ್ದಾರೆ. ಇತ್ತ ಫೇಸ್ಬುಕ್ನಲ್ಲಿ ಸ್ವತಃ ನಾಸೀರ್ ಹರಿದಾಡಿದ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿದ್ದಕ್ಕೆ ಎಲ್ಲರಿಗೂ ಧನ್ಯವಾದ. ನಾನು ಮನೆಯಲ್ಲೇ ಆರಾಮವಾಗಿದ್ದೇನೆ. ದಯಾಮಾಡಿ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದಿದ್ದಾರೆ. (ಏಜೆನ್ಸೀಸ್)