ಸಿನಿವಾಣಿ

ಜ್ವಾಲಾ ಗುಟ್ಟಾ ಜತೆ ಶೀಘ್ರವೇ ಹಸೆಮಣೆ ಏರಲಿದ್ದಾರೆ ನಟ ವಿಷ್ಣು ವಿಶಾಲ್​: ಇಬ್ಬರಿಗು ಇದು 2ನೇ ಮದ್ವೆ!

ಚೆನ್ನೈ: ಹಲವು ದಿನಗಳಿಂದ ಡೇಟಿಂಗ್​ ಮಾಡುತ್ತಿರುವ ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಮತ್ತು ಕಾಲಿವುಡ್​ ನಟ ವಿಷ್ಣು ವಿಶಾಲ್ ಶೀಘ್ರದಲ್ಲೇ ಮದುವೆ ಆಗಲಿದ್ದಾರೆ. ಈ ಬಗ್ಗೆ ಸ್ವತಃ ವಿಷ್ಣು ವಿಶಾಲ್​ ಅವರೇ ಮಾಧ್ಯಮಗಳ ಮುಂದೆ ಖಚಿತಪಡಿಸಿದ್ದಾರೆ.

ಬಹುನಿರೀಕ್ಷಿತ ಅರಣ್ಯ ಚಿತ್ರದ ಪ್ರೀ ರಿಲೀಸ್​ ಈವೆಂಟ್​ ವೇಳೆ ಮಾಧ್ಯಮಗಳ ಮುಂದೆ ಈ ವಿಚಾರವನ್ನು ವಿಶಾಲ್​ ಹೇಳಿದರು. ಅಲ್ಲದೆ, ಚಿತ್ರೀಕರಣದ ವೇಳೆ ಬೇಷರತ್ ಬೆಂಬಲ ತೋರಿದ ಜ್ವಾಲಾಗೆ ಇದೇ ವೇಳೆ ವಿಶಾಲ್​ ಧನ್ಯವಾದ ಹೇಳಿದರು. ಅಂದಹಾಗೆ ಅರಣ್ಯ ಚಿತ್ರ ಮೂರು ಭಾಷೆ (ತೆಲುಗು, ತಮಿಳು ಮತ್ತು ಹಿಂದಿ) ಗಳಲ್ಲಿ ತಯಾರಾಗಿದೆ. ಚಿತ್ರದಲ್ಲಿ ವಿಶಾಲ್​ ಮಾವುತನ ಪಾತ್ರ ಮಾಡಿದ್ದು, ಮಾರ್ಚ್​ 26ಕ್ಕೆ ಚಿತ್ರ ಬಿಡುಗಡೆ ಆಗಲಿದೆ.

ಹಲವಾರು ದಿನಗಳಿಂದ ಡೇಟಿಂಗ್​ ಮಾಡುತ್ತಿರುವ ಜ್ವಾಲಾ ಮತ್ತು ವಿಶಾಲ್, ಒಟ್ಟಿಗೆ ಇರುವ ಫೋಟೋಗಳನ್ನು ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಇಬ್ಬರು ಮಾಲ್ಡೀವ್ಸ್​ ಭೇಟಿ ನೀಡಿದ್ದರು. ಅರಣ್ಯ ಚಿತ್ರದ ಪ್ರಿ ರಿಲೀಸ್​ ಈವೆಂಟ್​ ವೇಳೆ ಮದುವೆಯ ಯೋಜನೆ ಬಗ್ಗೆ ವಿಶಾಲ್​ ಮಾತನಾಡಿದರು.

ನಾವಿಬ್ಬರು ಆದಷ್ಟು ಬೇಗ ಮದುವೆ ಆಗಲಿದ್ದೇವೆ. ನಾನು ತೆಲುಗು ಅಳಿಯನಾಗಲು ಹೊರಟ್ಟಿದ್ದೇನೆ. ನಾನು ತುಂಬಾ ಸಂತೋಷವಾಗಿದ್ದೇನೆ. ಶೀಘ್ರದಲ್ಲೇ ಮದುವೆ ದಿನಾಂಕವನ್ನು ಘೋಷಣೆ ಮಾಡುತ್ತೇವೆ ಎಂದು ವಿಶಾಲ್​ ಮಾಧ್ಯಮಗಳ ಮುಂದೆ ಹೇಳಿದರು. ಅರಣ್ಯ ಚಿತ್ರದ ಶೂಟಿಂಗ್​ ಜ್ವಾಲಾ ತಮ್ಮ ಜತೆಯಲ್ಲೇ ಇದ್ದರು ಎಂದು ಇದೇ ವೇಳೆ ತಿಳಿಸಿದರು.

2020ರ ಸೆಪ್ಟೆಂಬರ್‌ 7ರಂದು ಜ್ವಾಲಾ ಅವರ 37ನೇ ಜನ್ಮದಿನದಂದು ವಿಶಾಲ್​ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಅದೇ ದಿನ ಇಬ್ಬರ ನಿಶ್ಚಿತಾರ್ಥವು ಆಗಿದೆ. ಬ್ಯಾಡ್ಮಿಂಟನ್ ಆಟಗಾರ ಚೇತನ್ ಆನಂದ್ ಅವರನ್ನು ವರಿಸಿದ್ದ ಡಬಲ್ಸ್ ಆಟಗಾರ್ತಿ ಜ್ವಾಲಾ ಗುಟ್ಟಾ, 6 ವರ್ಷಗಳ ದಾಂಪತ್ಯ ಜೀವನದ ಬಳಿಕ 2011ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಬಳಿಕ ಮಾಜಿ ಕ್ರಿಕೆಟಿಗ ಮೊಹಮದ್ ಅಜರುದ್ದೀನ ಜತೆಗೂ ಅವರ ಹೆಸರು ಕೇಳಿಬಂದಿತ್ತು. ಕಳೆದೊಂದು ವರ್ಷದಿಂದ ವಿಷ್ಣು ವಿಶಾಲ್ ಜತೆಗೆ ಜ್ವಾಲಾ ಡೇಟಿಂಗ್‌ನಲ್ಲಿದ್ದಾರೆ.

ಇನ್ನು ವಿಷ್ಣು ವಿಶಾಲ್ 2011ರಲ್ಲಿ ತಮಿಳು ನಟ ಕೆ. ನಟರಾಜ್ ಅವರ ಪುತ್ರಿ ರಜಿನಿಯನ್ನು ವಿವಾಹವಾಗಿದ್ದರು. 2017ರಲ್ಲಿ ಪುತ್ರ ಜನಿಸಿದ ಬಳಿಕ 2018ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. (ಏಜೆನ್ಸೀಸ್​)