ಬೆಂಗಳೂರು: ದೊಡ್ಡದೊಡ್ಡ ನಿರೀಕ್ಷಿತ ಚಿತ್ರಗಳು, ಪ್ಯಾನ್ ಇಂಡಿಯಾ ಚಿತ್ರಗಳೆಲ್ಲ ಬಿಡುಗಡೆ ದಿನಾಂಕವನ್ನು ಘೋಷಿಸಿವೆ. ಆದರೆ, ‘ವಿಕ್ರಾಂತ್ ರೋಣ’ ಚಿತ್ರದ ಬಿಡುಗಡೆಯ ದಿನಾಂಕ ಮಾತ್ರ ಇದುವರೆಗೂ ಘೋಷಣೆಯಾಗಿಲ್ಲ. ಹಾಗಾದರೆ, ಬಿಡುಗಡೆ ಯಾವಾಗ? ಎಂಬ ಪ್ರಶ್ನೆ ಸಹಜ. ನಿರ್ವಪಕ ಜಾಕ್ ಮಂಜು ಹೇಳುವಂತೆ, ಡಿಸೆಂಬರ್ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆಯಂತೆ. ಈ ಕುರಿತು ಮಾತನಾಡುವ ಅವರು, ‘ಮೊದಲು ‘ಕೋಟಿಗೊಬ್ಬ 3’ ಬಿಡುಗಡೆಯಾಗಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಡಿಸೆಂಬರ್ನಲ್ಲಿ ‘ವಿಕ್ರಾಂತ್ ರೋಣ’ ಬರಲಿದೆ. ಒಟಿಟಿಗಳಿಂದ ಸಾಕಷ್ಟು ಆಫರ್ಗಳು ಬರುತ್ತಿವೆ. ಆದರೆ, ಚಿತ್ರಮಂದಿರಗಳಲ್ಲಿ ಮೊದಲು ಬಿಡುಗಡೆ ಮಾಡಿ, ಮೂರು ವಾರಗಳ ನಂತರ ಒಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡಿ ಎಂದು ಸುದೀಪ್ ಹೇಳಿದ್ದಾರೆ’ ಎನ್ನುತ್ತಾರೆ ಮಂಜು.
ಈಗಾಗಲೇ, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಸುದೀಪ್ ಮಲಯಾಳಂ ಬಿಟ್ಟು ಮಿಕ್ಕ ನಾಲ್ಕು ಭಾಷೆಗಳಲ್ಲಿ ಡಬ್ಬಿಂಗ್ ಮುಗಿಸಿದ್ದಾರಂತೆ. ಮಿಕ್ಕಂತೆ, ಗ್ರಾಫಿಕ್ಸ್ ಕೆಲಸ ನಡೆಯುತ್ತಿದ್ದು, ಆದಷ್ಟು ಬೇಗ ಮುಗಿಸಿ, ಚಿತ್ರ ಬಿಡುಗಡೆ ಮಾಡುವ ವಿಶ್ವಾಸದಲ್ಲಿ ಅವರಿದ್ದಾರೆ. ಇನ್ನು, ಚಿತ್ರದ ಬಜೆಟ್ 100 ಕೋಟಿ ರೂ ತಲುಪುತ್ತದೆ ಎಂಬ ಮಾತಿದೆ. ಇದನ್ನು ಒಪು್ಪವ ಅವರು, ‘ಚಿತ್ರ ನಾವು ಅಂದುಕೊಂಡಂತೆ ಮೂಡಿ ಬರಬೇಕಾದರೆ ಮತ್ತು ಎಲ್ಲರನ್ನೂ ತಲುಪಬೇಕಾದರೆ, 100 ಕೋಟಿ ರೂ.ವರೆಗೂ ಬಜೆಟ್ ಆಗುತ್ತದೆ. ಮೇಕಿಂಗ್ ಮತ್ತು ಪ್ರಮೋಷನ್ ವಿಷಯದಲ್ಲಿ ಎಲ್ಲೂ ರಾಜಿಯಾಗುವುದಕ್ಕೆ ನಮಗೆ ಇಷ್ಟವಿಲ್ಲ’ ಎನ್ನುತ್ತಾರೆ.