ಸಿನಿವಾಣಿ

ಏಪ್ರಿಲ್ 15 ರಂದು ಸಪ್ರೈಸ್ ನೀಡಲು ಮುಂದಾದ ವಿಕ್ರಾಂತ್ ರೋಣ ಚಿತ್ರ ತಂಡ

ಬೆಂಗಳೂರು: ‘ಕಿಚ್ಚ’ ಸುದೀಪ್ ನಟನೆಯ ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಸಿನಿಮಾ ಶೂಟಿಂಗ್ ಹಂತದಿಂದಲೂ ಸುದ್ದಿಯಲ್ಲಿದೆ. ಅಷ್ಟೇ ಯಾಕೆ, ಬಹುಭಾಷೆಯಲ್ಲಿ ಸಿದ್ಧವಾಗುತ್ತಿರುವ ‘ರೋಣ’, ಇತ್ತೀಚೆಗೆ ದುಬೈನ ಬುರ್ಜ್ ಖಲೀಫಾ ಮೇಲೆಯೂ ಶೀರ್ಷಿಕೆ ಅನಾವರಣ ಮಾಡಿ ಸ್ಯಾಂಡಲ್​ವುಡ್​ನಲ್ಲಿ ಯಾರೂ ಮಾಡದ ದಾಖಲೆಯೊಂದನ್ನು ಬರೆದಿತ್ತು. ಇದೀಗ ಮತ್ತೊಂದು ಸರ್ಪ್ರೖೆಸ್ ನೀಡಲು ತಂಡ ಪ್ಲಾನ್ ಮಾಡಿದೆ. ಏನದು? ಅದನ್ನು ಏ. 15ರ ಬೆಳಗ್ಗೆ 11.10ಕ್ಕೆ ಚಿತ್ರತಂಡವೇ ಘೋಷಿಸಲಿದೆ. ಹಾಗಾದರೆ ಆ ಸರ್ಪ್ರೖೆಸ್ ಇವುಗಳಲ್ಲಿ ಒಂದಾಗಿರಲಿದೆಯೇ?

1 ‘ವಿಕ್ರಾಂತ್ ರೋಣ’ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದ್ದರೂ, ಇಲ್ಲಿಯವರೆಗೂ ಚಿತ್ರದ ನಾಯಕಿ ಯಾರು ಎಂಬುದನ್ನು ತಂಡ ಸ್ಪಷ್ಟಪಡಿಸಿಲ್ಲ. ಶ್ರದ್ಧಾ ಶ್ರೀನಾಥ್ ನಾಯಕಿ ಎಂಬ ವಿಚಾರ ಆರಂಭದಲ್ಲಿಯೇ ಕೇಳಿಬಂದಿತ್ತಾದರೂ, ಆ ನಂತರ ಅವರು ನಟಿಸುತ್ತಿಲ್ಲ ಎಂದು ಹೇಳಲಾಗಿತ್ತು. ಹಾಗಾಗಿ, ಚಿತ್ರತಂಡವು ನಾಯಕಿ ಯಾರು ಎಂಬುದನ್ನು ಅಧಿಕೃತ ಮಾಡಲಿದೆಯೇ ಎಂಬ ಕುತೂಹಲವೂ ಇದೆ.

2 ಚಿತ್ರದ ವಿಶೇಷ ಹಾಡೊಂದರಲ್ಲಿ ಬಾಲಿವುಡ್ ನಟಿ ಜಾಕ್​ಲೀನ್ ಫರ್ನಾಂಡಿಸ್ ಕಾಣಿಸಿಕೊಳ್ಳುತ್ತಾರೆ ಎಂದು ನಿರ್ಮಾಪಕ ಜಾಕ್ ಮಂಜು ಸ್ಪಷ್ಟಪಡಿಸಿದ್ದರು. ಈ ಐಟಂ ಹಾಡಿಗೆ ಸಂಬಂಧಪಟ್ಟಂತೆ ಹೊಸ ಅಪ್​ಡೇಟ್ ಮಾಹಿತಿಯನ್ನು ತಂಡ ಬಿಡುಗಡೆ ಮಾಡಬಹುದೇ ಎಂಬ ಮಾತು ಕೇಳಿಬರುತ್ತಿದೆ.

3 ಮೂರನೇ ವಿಚಾರ ಏನೆಂದರೆ, ‘ವಿಕ್ರಾಂತ್ ರೋಣ’ ಚಿತ್ರದ ಬಹುತೇಕ ಶೂಟಿಂಗ್ ಮುಕ್ತಾಯವಾಗಿದೆ. ಹೈದರಾಬಾದ್ ಸೇರಿ ಕೇರಳದ ಹಲವೆಡೆ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ನಾಯಕಿ ಭಾಗದ ಚಿತ್ರೀಕರಣವಷ್ಟೇ ಬಾಕಿ ಇದೆ. ಹಾಗಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸುವ ಸಾಧ್ಯತೆಯೂ ದಟ್ಟವಾಗಿದೆ.