ಬೆಂಗಳೂರು: ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಸಿನಿಮಾ ಬಿಡುಗಡೆಗೆ ಹೆಚ್ಚು ದಿನ ಉಳಿದಿಲ್ಲ. ಫೆ. 24ರಂದು ವಿಶ್ವದಾದ್ಯಂತ ಚಿತ್ರ ರಿಲೀಸ್ಗೆ ಈಗಾಗಲೇ ತೆರೆಮರೆಯಲ್ಲಿ ಸಿದ್ಧತೆಗಳು ಸಮರೋಪಾದಿಯಲ್ಲಿ ಸಾಗಿವೆ. ಪ್ರಚಾರ ಕೆಲಸಗಳಿಗೂ ತಂಡ ಬಗೆಬಗೆ ಪ್ಲಾನ್ ಮಾಡಿಕೊಳ್ಳುತ್ತಿದೆ. ಹೀಗಿರುವಾಗಲೇ ಕರೊನಾ ಮತ್ತು ಒಮಿಕ್ರಾನ್ ಹಾವಳಿ ಮತ್ತೆ ಹೊಸ ಆತಂಕ ಸೃಷ್ಟಿಸಿದೆ. ಇತ್ತ ಇದೇ ಶುಕ್ರವಾರ ಬಿಡುಗಡೆ ಆಗಬೇಕಿದ್ದ ‘ಆರ್ಆರ್ಆರ್’ ಚಿತ್ರ ಸಹ ಅನಿರ್ದಿಷ್ಟಾವಧಿಗೆ ಮುಂದೆ ಹೋಗಿದೆ. ಹಾಗಾದರೆ, ‘ವಿಕ್ರಾಂತ್ ರೋಣ’ ಚಿತ್ರ ಯಾವಾಗ?
ಸದ್ಯದ ಮಟ್ಟಿಗೆ ಬದಲಾವಣೆ ಇಲ್ಲ ಎಂದು ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ. ‘ನಮ್ಮ ಪ್ಲಾನ್ ಪ್ರಕಾರ ಸದ್ಯಕ್ಕೆ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಫೆ. 24ರಂದೇ ‘ರೋಣ’ ಬರಲಿದ್ದಾನೆ. ದೆಹಲಿ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸೇರಿ ಕೆಲ ರಾಜ್ಯಗಳಲ್ಲಿ ಶೇ. 50 ಆಸನ ಭರ್ತಿಗೆ ಅನುಮತಿ ನೀಡಿದ್ದರಿಂದ ‘ಆರ್ಆರ್ಆರ್’ ಮುಂದೂಡಿಕೆ ಆಗಿದೆ. ಹಾಗಂತ ಈಗಲೇ ನಾವು ನಮ್ಮ ಸಿನಿಮಾದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಅಸಾಧ್ಯ. ಪರಿಸ್ಥಿತಿ ಕೈ ಮೀರಿದರೆ ಮಾತ್ರ ಬದಲಾವಣೆ. ಇಲ್ಲದಿದ್ದರೆ ಘೋಷಿಸಿದ ದಿನದಂದೇ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಪ್ರಚಾರಕ್ಕೂ ಕೊಂಚ ತಡವಾಗಿದೆ. ಇನ್ನೇನು ಅದೂ ಸಹ ಶುರುವಾಗಲಿದೆ’ ಎನ್ನುತ್ತಾರೆ ಅನೂಪ್.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷದ ಆಗಸ್ಟ್ 19ರಂದೇ ‘ವಿಕ್ರಾಂತ್ ರೋಣ’ ಸಿನಿಮಾ ತೆರೆಗೆ ಬರಬೇಕಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಶಾಲಿನಿ ಆರ್ಟ್ಸ್ ಬ್ಯಾನರ್ನಲ್ಲಿ ಸಿದ್ಧವಾಗಿರುವ ‘ವಿಕ್ರಾಂತ್ ರೋಣ’ ಸಿನಿಮಾ ಕನ್ನಡದ ಜತೆಗೆ ದಕ್ಷಿಣದ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗೂ ಡಬ್ ಆಗಿ ತೆರೆಕಾಣಲಿದೆ. ಬಾಲಿವುಡ್ ನಟಿ ಜಾಕ್ಲೀನ್ ಫರ್ನಾಂಡೀಸ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.