ಸಿನಿವಾಣಿ

ಇಂದು ವಿಜಯಾನಂದ ಆಡಿಯೋ ಬಿಡುಗಡೆ; ಡಾ.ವಿಜಯ ಸಂಕೇಶ್ವರರ ಜೀವನಾಧಾರಿತ ಚಿತ್ರ

Webdesk - Ravikanth

ಬೆಂಗಳೂರು: ಡಾ. ವಿಜಯ ಸಂಕೇಶ್ವರರ ಜೀವನಾಧಾರಿತ ‘ವಿಜಯಾನಂದ’ ಚಿತ್ರ, ಪ್ರಾರಂಭದಿಂದಲೂ ಸ್ಟಾರ್ ಕಾಸ್ಟ್, ಕಲಾವಿದರ ಲುಕ್, ಮೇಕಿಂಗ್, ಕುತೂಹಲ ಮೂಡಿಸುವ ಟೀಸರ್, ಬಹುಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಬಿಡುಗಡೆ ಯೋಜನೆ ಸೇರಿದಂತೆ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಿದೆ. ಈಗ ಹಾಡುಗಳ ಸರದಿ. ‘ವಿಜಯಾನಂದ’ ಚಿತ್ರದ ಆಡಿಯೋ ಇಂದು (ಭಾನುವಾರ) ಬಿಡುಗಡೆಯಾಗಲಿದೆ.

‘ಹಾಗೆ ಆದ ಆಲಿಂಗನ...’ ಎಂದು ಸಾಗುವ ರೊಮ್ಯಾಂಟಿಕ್ ಸಾಂಗ್ ಇದಾಗಿದ್ದು, ನಾಯಕ ನಿಹಾಲ್ ಮತ್ತು ನಾಯಕಿ ಸಿರಿ ಪ್ರಹ್ಲಾದ್ ನಡುವೆ ಚಿತ್ರಿಸಲಾಗಿದೆ. ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ, ಹಳೇಬೀಡು, ಬೇಲೂರು ಸೇರಿದಂತೆ 10ಕ್ಕೂ ಹೆಚ್ಚು ಪ್ರೇಕ್ಷಣೀಯ ಸ್ಥಳಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಹೆಸರಾಂತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಧನಂಜಯ್ ರಂಜನ್ ಸಾಹಿತ್ಯ ರಚಿಸಿದ್ದಾರೆ. ಒರಾಯನ್ ಮಾಲ್​ನಲ್ಲಿ ನಡೆಯಲಿರುವ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಗೋಪಿ ಸುಂದರ್ ಹಾಡಿನ ಪ್ರದರ್ಶನ ನೀಡಲಿದ್ದಾರೆ. ನಟ ಶರಣ್, ನಟಿ ಹರ್ಷಿಕಾ ಪೂಣಚ್ಚ ಸೇರಿದಂತೆ ಸ್ಯಾಂಡಲ್​ವುಡ್ ನಟ, ನಟಿಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

‘ವಿಜಯಾನಂದ’ ಚಿತ್ರವನ್ನು ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಡಾ. ಆನಂದ ಸಂಕೇಶ್ವರ ನಿರ್ವಿುಸುತ್ತಿದ್ದು, ರಿಷಿಕಾ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಡಾ. ವಿಜಯ ಸಂಕೇಶ್ವರ ಪಾತ್ರದಲ್ಲಿ ನಿಹಾಲ್, ಶ್ರೀಮತಿ ಲಲಿತಾ ಸಂಕೇಶ್ವರ ಪಾತ್ರದಲ್ಲಿ ಸಿರಿ ಪ್ರಹ್ಲಾದ್, ಡಾ. ವಿಜಯ ಸಂಕೇಶ್ವರರ ತಂದೆ ಬಿ.ಜಿ. ಸಂಕೇಶ್ವರರ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್, ಡಾ. ಆನಂದ ಸಂಕೇಶ್ವರ ಪಾತ್ರದಲ್ಲಿ ಭರತ್ ಬೋಪಣ್ಣ ಹಾಗೂ ವಿಜಯ ಸಂಕೇಶ್ವರರ ಗುರುಗಳ ಪಾತ್ರದಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಕೆಲವೇ ದಿನಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.