ಸಿನಿವಾಣಿ

ಅಗತ್ಯವಿರುವವರಿಗೆ ನೆರವಾಗಿ ... ಸಣ್ಣ ವ್ಯಾಪಾರಿಗಳ ಪರ ನಿಂತ ದರ್ಶನ್ ಪತ್ನಿ

ಇತ್ತೀಚೆಗಷ್ಟೇ ಉಪೇಂದ್ರ ಅವರು ಸ್ವದೇಶಿ ಚಳವಳಿಗೆ ಕರೆ ನೀಡಿದ್ದರು. ವಿದೇಶಿ ವಸ್ತುಗಳನ್ನು ಮಾತ್ರವಲ್ಲ, ವಿಚಾರವನ್ನೂ ತಿರಸ್ಕರಿಸಿ ಎಂದಿದ್ದರು. ಸ್ವದೇಶೀ ವಿಚಾರ ಪುರಸ್ಕರಿಸಿ ಮತ್ತು ವಸ್ತು ಖರೀದಿಸಿ ಎಂದು ಹೇಳಿದ್ದರು. ಈಗ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಸಹ ಇದಕ್ಕೆ ಪೂರಕವಾಗಿ ಮಾತನಾಡಿದ್ದು, ಸಣ್ಣ ವ್ಯಾಪಾರಿಗಳ ಪರ ನಿಂತಿದ್ದಾರೆ.

ಈ ಕುರಿತು ಗುರುವಾರ ಅವರೊಂದು ಪೋಸ್ಟ್ ಹಾಕಿದ್ದಾರೆ. ಸಣ್ಣ ವ್ಯಾಪಾರಿಗಳು ಮತ್ತು ಅಂಗಡಿಗಳ ಪರವಾಗಿ ನಿಲ್ಲಿ ಎಂದು ಕರೆ ನೀಡಿದ್ದಾರೆ.

‘ಕೋವಿಡ್ 19ನಿಂದ ಸಣ್ಣ ವ್ಯಾಪಾರಿಗಳು ಬಹಳ ಕಷ್ಟಪಡುತ್ತಿದ್ದಾರೆ. ಒಂದು ಕೆಟ್ಟ ತಿಂಗಳು ಅವರ ಬ್ಯುಸಿನೆಸ್ ಹಾಳು ಮಾಡುವ ಸಾಧ್ಯತೆ ಇದೆ. ಲಾಕ್‌ಡೌನ್ ಮುಗಿದ ಮೇಲೆ ಹೊರಗೆ ಹೋಗಿ ತಿನ್ನಿ. ತರಕಾರಿ ವ್ಯಾಪಾರಿಗಳಿಂದ ತರಕಾರಿ ಖರೀದಿಸಿ. ದರ್ಶಿನಿಗಳಿಗೆ ಹೋಗಿ ಕಾಫಿ ಕುಡಿಯಿರಿ. ಕಿರಾಣಿ ಅಂಗಡಿಗಳಲ್ಲಿ ಖರೀದಿ ಮಾಡಿ. ಅವರಿಗೆ ನಿಮ್ಮ ಸಹಾಯದ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.

‘ಅಮೇಜಾನ್, ಪಿಜ್ಜಾ ಹಟ್, ಮೆಕ್‌ಡೊನಾಲ್ಡ್, ಕೆಎ್ಸಿಗಳು ಬದುಕಬಲ್ಲವು. ಹಾಗಾಗಿ ಅಗತ್ಯವಿರುವವರಿಗೆ ನೆರವಾಗಿ. ಸಣ್ಣ ಅಂಗಡಿಗಳಲ್ಲಿ ಖರೀದಿಸಿ, ಆರ್ಥಿಕತೆಗೆ ಬಲ ನೀಡಿ’ ಎಂದು ಟ್ವೀಟ್ ಮಾಡಿದ್ದಾರೆ.

ವಿಜಯಲಕ್ಷ್ಮೀ ಅವರ ಈ ಟ್ವೀಟ್‌ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ದರ್ಶನ್ ಅಭಿಮಾನಿಗಳು, ಈ ಟ್ವೀಟ್‌ಗೆ ದೊಡ್ಡ ಮಟ್ಟದಲ್ಲಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.