ಮುಂಬೈ: ಮುಂದಿನ ವರ್ಷದ ಅತೀ ನಿರೀಕ್ಷಿತ ಚಿತ್ರಗಳ ಪೈಕಿ ಪ್ರಭಾಸ್ ಅಭಿನಯದ 'ಸಲಾರ್' ಸಹ ಒಂದು. ಈ ಚಿತ್ರವು ತಮ್ಮ ಸಂಸ್ಥೆಯ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುತ್ತದೆ ಎಂಬ ವಿಶ್ವಾಸವನ್ನು ಹೊಂಬಾಳೆ ಫಿಲಂಸ್ ವಿಜಯ್ ಕಿರಗಂದೂರು ವ್ಯಕ್ತಪಡಿಸಿದ್ದಾರೆ.
ವಿಜಯ್ ಕಿರಗಂದೂರು ಇತ್ತೀಚೆಗೆ ಮುಂಬೈನಲ್ಲಿ ನಡೆದ ಒಂದು ಸಮಾರಂಭವೊಂದರಲ್ಲಿ ಭಾಗವಹಿಸಿ ಹಲವು ವಿಚಾರಗಳನ್ನು ಮಾತನಾಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ತಮ್ಮ ಸಂಸ್ಥೆಯು ಮೂರು ಸಾವಿರ ಕೋಟಿ ಹೂಡಿಕೆ ಮಾಡುತ್ತದೆ ಎಂಬುದರಿಂದ ಹಿಡಿದು, 'ಕಾಂತಾರ 2' ಚಿತ್ರದವರೆಗೂ ಹಲವು ವಿಷಯಗಳನ್ನು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮದೇ ಸಂಸ್ಥೆ ನಿರ್ಮಿಸುತ್ತಿರುವ ಇನ್ನೊಂದು ಮಹತ್ವಾಕಾಂಕ್ಷೆಯ ಚಿತ್ರ 'ಸಲಾರ್' ಬಗ್ಗೆಯೂ ಮಾತನಾಡಿದ್ದಾರೆ.
'ಈಗಾಗಲೇ' ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಜನವರಿ ಹೊತ್ತಿಗೆ ಚಿತ್ರೀಕರಣ ಸಂಪೂರ್ಣವಾಗಲಿದೆ. ಗ್ರಾಫಿಕ್ಸ್ ಕೆಲಸಗಳಿಗೆ ಆರು ತಿಂಗಳಾದರೂ ಬೇಕು. ಅವೆಲ್ಲವನ್ನೂ ಮುಗಿಸಿ, ಸೆ. 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಅದೊಂದು ಔಟ್ ಆಂಡ್ ಔಟ್ ಆಕ್ಷನ್ ಚಿತ್ರ. ಚೆನ್ನಾಗಿ ಮೂಡಿ ಬಂದಿದೆ. ಆ ಚಿತ್ರವು ನಮ್ಮ ಸಂಸ್ಥೆಯ ಚಿತ್ರಗಳಾದ 'ಕೆಜಿಎಫ್', 'ಕೆಜಿಎಫ್ 2' ಮತ್ತು 'ಕಾಂತಾರ' ಚಿತ್ರಗಳು ಮಾಡಿರುವ ದಾಖಲೆಗಳನ್ನು ಮುರಿಯಲಿದೆ ಎಂಬ ನಂಬಿಕೆ ನನಗಿದೆ' ಎಂದಿದ್ದಾರೆ.
'ಸಲಾರ್' ಚಿತ್ರದ ಮೂಲಕ ಟಾಲಿವುಡ್ಗೆ ಅಧಿಕೃತವಾಗಿ ಎಂಟ್ರಿ ಕೊಡುತ್ತಿದ್ದಾರೆ ವಿಜಯ್ ಕಿರಗಂದೂರು. 'ಸಲಾರ್' ಚಿತ್ರವು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದಾರೆ. ಇನ್ನು, ಮಲಯಾಳಂ ನಟ ಪೃಥ್ವಿರಾಜ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಕನ್ನಡದ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ.