ಸಿನಿವಾಣಿ

ಎಲ್ಲ ಸ್ಟಾರ್​ಗಳನ್ನು ಹಿಂದಿಕ್ಕಿ ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟನಾದ ವಿಜಯ್​ …

ಚೆನ್ನೈ: ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು? ಈ ಪ್ರಶ್ನೆಗೆ ಕೆಲವು ಹೆಸರುಗಳು ಉತ್ತರವಾಗಿ ಬರಬಹುದು. ಅಕ್ಷಯ್​ ಕುಮಾರ್​, ಸಲ್ಮಾನ್​ ಖಾನ್​, ಪ್ರಭಾಸ್​ ... ಹೀಗೆ ಇವರೆಲ್ಲ ಒಂದು ಚಿತ್ರಕ್ಕೆ ಸಂಭಾವನೆಯಾಗಿ 80ರಿಂದ 100 ಕೋಟಿಯವರೆಗೂ ಸಂಭಾವನೆಯನ್ನು ಪಡೆಯುತ್ತಾರೆ.

ಈಗ ಇವರೆಲ್ಲರನ್ನೂ ಹಿಂದಿಕ್ಕಿ, ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಾಗಿ ತಮಿಳಿನ 'ಇಳಯ ದಳಪತಿ' ವಿಜಯ್​ ಹೊರಹೊಮ್ಮಿದ್ದಾರೆ. ಮೂಲಗಳ ಪ್ರಕಾರ, ನಾಳೆ ಬಿಡುಗಡೆಯಾಗುತ್ತಿರುವ 'ವಾರಿಸು' ಚಿತ್ರಕ್ಕೆ ಅವರು ಪಡೆಯುತ್ತಿರುವ ಸಂಭಾವನೆ 150 ಕೋಟಿ ರೂ.ಗಳಂತೆ. ಆಶ್ಚರ್ಯವಾಗಬಹುದು. ಆದರೂ ಇದು ನಿಜ ಎಂದು ಹೇಳಲಾಗುತ್ತಿದೆ.

ಅದಕ್ಕೆ ಕಾರಣವೂ ಇದೆ. ವಿಜಯ್​ ಅವರಿಗೆ ಬರೀ ತಮಿಳುನಾಡು ಮಾತ್ರವಲ್ಲ, ಇಡೀ ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲ, ಅವರ ಸೋತ ಚಿತ್ರಗಳು ಸಹ ನಿರ್ಮಾಪಕರಿಗೆ ದೊಡ್ಡ ಹಣ ತಂದುಕೊಟ್ಟಿವೆ. ಮೇಲಾಗಿ, 'ವಾರಿಸು' ಚಿತ್ರವು ತೆಲುಗು ಮತ್ತು ಹಿಂದಿ ಭಾಷೆಗಳಿಗೂ ಡಬ್​ ಆಗಿ ಬಿಡುಗಡೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅವರು ಅಷ್ಟೊಂದು ಸಂಭಾವನೆಯನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

'ವಾರಿಸು' ಚಿತ್ರವನ್ನು ವಂಶಿ ಪಡಿಪಲ್ಲಿ ನಿರ್ದೇಶಿಸಿದ್ದು, ದಿಲ್​ ರಾಜು ನಿರ್ಮಾಣ ಮಾಡಿದ್ದಾರೆ. ವಿಜಯ್​ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಮಿಕ್ಕಂತೆ ಶರತ್​ ಕುಮಾರ್​, ಪ್ರಕಾಶ್​ ರೈ, ಜಯಸುಧಾ, ಶ್ರೀಕಾಂತ್​ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ತಮಿಳು ಅವತರಣಿಕೆಯು 11ಕ್ಕೆ ಬಿಡುಗಡೆಯಾದರೆ, ಹಿಂದಿ ಮತ್ತು ತೆಲುಗು ಅವತರಣಿಕೆಗಳು ಕ್ರಮವಾಗಿ 13 ಮತ್ತು 14ಕ್ಕೆ ಬಿಡುಗಡೆಯಾಗಲಿದೆ.