ಸಿನಿವಾಣಿ

ಪ್ಲಾಸ್ಮಾ ದಾನಿಗಳಿಗೆ ವಿಜಯ್​ ದೇವರಕೊಂಡ ಕಡೆಯಿಂದ ಸರ್ಪ್ರೈಸ್​!

ದಿನೇದಿನೆ ಕರೊನಾ ಹಾವಳಿ ಹೆಚ್ಚಾಗುತ್ತಿದೆಯಾದರೂ, ಇತ್ತೀಚಿನ ವರದಿಗಳ ಪ್ರಕಾರ ಗುಣಮುಖರಾಗುತ್ತಿರುವ ಪ್ರಮಾಣವೂ ಅಧಿಕವಾಗುತ್ತಿದೆ. ಆದರೆ, ಕರೊನಾಗೆಂದೇ ಸೀಮಿತವಾದ ಲಸಿಕೆ ಮಾತ್ರ ಇನ್ನೂ ಪೂರ್ಣ ಪ್ರಮಾಣದಲ್ಲಿ ಎಲ್ಲರನ್ನು ತಲುಪಿಲ್ಲ. ಈ ನಡುವೆ ಕರೊನಾದಿಂದ ಗುಣಮುಖರಾದ ವ್ಯಕ್ತಿ ಪ್ಲಾಸ್ಮಾ ದಾನ ಮಾಡುವ ಮೂಲಕ ಇನ್ನೊಬ್ಬ ಕರೊನಾ ರೋಗಿಯನ್ನು ಕಾಪಾಡಬಹುದಾಗಿದೆ. ಇದೀಗ ಈ ಪ್ಲಾಸ್ಮಾ ದಾನದ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಟಾಲಿವುಡ್​ ನಟ ವಿಜಯ್​ ದೇವರಕೊಂಡ ಸಹ ಪ್ಲಾಸ್ಮಾ ದಾನದ ಬಗ್ಗೆ ಮಾತನಾಡಿದ್ದಾರೆ.

ಹೌದು, ಇತ್ತೀಚೆಗಷ್ಟೇ ಹೈದರಾಬಾದ್​ನಲ್ಲಿ ಕರೊನಾ ರೋಗಿಗಳಿಗೆ ಪ್ಲಾಸ್ಮಾ ದಾನ ಮಾಡಿದ ಒಂದಷ್ಟು ಮಂದಿಯನ್ನು ಸನ್ಮಾನಿಸುವ ಕೆಲಸ ನಡೆಯಿತು. ನಟ ವಿಜಯ್ ದೇವರಕೊಂಡ ವಿಶೇಷ ಅತಿಥಿಯಾಗಿ ಆಗಮಿಸಿ ಪ್ಲಾಸ್ಮಾ ದಾನ ಮಾಡಿದ 10ಕ್ಕೂ ಅಧಿಕ ಮಂದಿಯನ್ನು ಸನ್ಮಾನಿಸಿದರು. ದಾನಿಗಳಿಗೂ ಈ ಸನ್ಮಾನ ಅಚ್ಚರಿ ಮೂಡಿಸಿತ್ತು.

‘ಪ್ಲಾಸ್ಮಾ ಥೆರಪಿ ಮೂಲಕ ಈಗಾಗಲೇ ಸಾಕಷ್ಟು ಮಂದಿ ಗುಣಮುಖರಾಗಿದ್ದಾರೆ. ಮುಂದಿನ ದಿನಗಳಲ್ಲಿ ಪ್ಲಾಸ್ಮಾ ದಾನಿಗಳ ಪ್ರಮಾಣದಲ್ಲಿಯೂ ಏರಿಕೆ ಕಾಣಲಿ. ಸದ್ಯ ಇದಕ್ಕೆ ನಿಖರವಾದ ಮದ್ದು ಇನ್ನೂ ಬಂದಿಲ್ಲ. ಹಾಗಾಗಿ ಹೆಚ್ಚೆಚ್ಚು ಮಂದಿ ಈ ಕೆಲಸದಲ್ಲಿ ತೊಡಗಿಸಿಕೊಳ್ಳಲಿ’ ಎಂದಿರುವ ವಿಜಯ್​, ದಾನಿಗಳಿಗೆ ಸನ್ಮಾನಿಸಿ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.