ಬೆಂಗಳೂರು: ಗಣೇಶ್ ಅಭಿನಯದಲ್ಲಿ ‘ಸಿಂಪಲ್’ ಸುನಿ ನಿರ್ದೇಶಿಸಿರುವ ‘ಸಖತ್’ ಚಿತ್ರವು ನವೆಂಬರ್ ಎರಡನೇ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ ಭಾನುವಾರ ಬೆಳಗ್ಗೆ ಯೂಟ್ಯೂಬ್ನ ಆನಂದ್ ಆಡಿಯೋ ಚಾನಲ್ನಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಸಖತ್ ಹಿಟ್ ಆಗಿದೆ.
ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಜನಮನ್ನಣೆಗೆ ಪಾತ್ರವಾದ ಈ ಟೀಸರ್, ನಂತರ ಅದೆಷ್ಟು ಬೇಗ ಹೆಚ್ಚುಹೆಚ್ಚು ವೀಕ್ಷಣೆಗಳನ್ನು ಪಡೆಯಿತು ಎಂದರೆ, 10 ಗಂಟೆಗಳಲ್ಲಿ 5 ಲಕ್ಷ ವೀಕ್ಷಣೆ ಪಡೆಯಿತು. 25 ಗಂಟೆಗಳಲ್ಲಿ 1.5 ಮಿಲಿಯನ್ ವೀಕ್ಷಣೆ ಪಡೆದಿದ್ದು, ಸೋಮವಾರದ ಸಂಜೆ ಹೊತ್ತಿಗೆ 1.7 ಮಿಲಿಯನ್ ಬಾರಿಗೆ ವೀಕ್ಷಣೆಗೊಳಗಾಗಿದ್ದು, ಇದರಿಂದ ಚಿತ್ರತಂಡ ಬಹಳ ಖುಷಿಯಾಗಿರುವುದಷ್ಟೇ ಅಲ್ಲ, ತಂಡದ ಆತ್ಮವಿಶ್ವಾಸ ಕೂಡಾ ಹೆಚ್ಚಿದೆ. ಇದೇ ಖುಷಿಯಲ್ಲಿ, ಟೀಸರ್ ನೋಡಿ ಯಶಸ್ವಿಗೊಳಿಸಿರುವ ಪ್ರೇಕ್ಷಕರಿಗೆ ಗಣೇಶ್ ಧನ್ಯವಾದ ಸಲ್ಲಿಸಿದ್ದಾರೆ.
ಈ ಚಿತ್ರದಲ್ಲಿ ಗಣೇಶ್ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರಿಗಿಲ್ಲಿ ನಿಶ್ವಿಕಾ ನಾಯ್ಡು ಮತ್ತು ಸುರಭಿ ಪುರಾಣಿಕ್ ಜೋಡಿಯಾಗಿದ್ದಾರೆ. ಕಾಮಿಡಿಯ ಜತೆಗೆ ಕ್ರೖೆಂ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ನಿಶಾ ವೆಂಕಟ್ ಕೋಣಂಕಿ ಮತ್ತು ಸುಪ್ರಿತ್ ನಿರ್ವಿುಸಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಟೀಸರ್ಗೆ ಒಳ್ಳೇ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತ ಚಿತ್ರ ಸೆನ್ಸಾರ್ ಅಂಗಳದಲ್ಲಿದ್ದು, ಇದೇ ನ. 12ಕ್ಕೆ ಚಿತ್ರ ಬಿಡುಗಡೆ ಆಗಲಿದೆ. ಅಂದಹಾಗೆ, ಸುನಿ ಮತ್ತು ಗಣೇಶ್ ಕಾಂಬಿನೇಷನ್ನಲ್ಲಿ ಮೂಡಿಬಂದ ಎರಡನೇ ಚಿತ್ರವಿದು.