ಚೆನ್ನೈ: ದಂತಚೋರ ವೀರಪ್ಪನ್ ಅವರ ಮಗಳು ಹಾಗೂ ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆಯಾಗಿರುವ ವಿಜಯಲಕ್ಷ್ಮೀ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, 'ಮಾವೀರನ್ ಪಿಳ್ಳೈ' ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಇತ್ತೀಚೆಗೆ ಹಾಡುಗಳ ಬಿಡುಗಡೆಯಾಗದೆ.
ಇದನ್ನೂ ಓದಿ: ಇಂಗ್ಲಿಷ್ ಮೋಹ.. ಟ್ರೋಲ್ ಆದ ಮೋಹಕತಾರೆ; ವೀಕೆಂಡ್ ವಿದ್ ರಮೇಶ್ ಶೋನಲ್ಲಿನ ರಮ್ಯಾ ನಡೆಗೆ ಕಿಡಿಕಾರಿದ ಕನ್ನಡಿಗರು
ವಿಜಯಲಕ್ಷ್ಮೀ ಅವರಿಗೆ ಬಾಲ್ಯದಿಂದಲೂ ನಟಿಸುವ ಆಸಕ್ತಿ ಇತ್ತಂತೆ. ಈ ಕುರಿತು ಮಾತನಾಡುವ ಅವರು, 'ಮೊದಲಿನಿಂದಲೂ ನಟಿಸುವ ತುಡಿತ ಇತ್ತು. ಈಗ ಅವಕಾಶ ಸಿಕ್ಕಿದೆ. ಕುಡಿತದಿಂದಾಗಿ ಪ್ರತೀ ಮನೆಯಲ್ಲೂ ಸಾಕಷ್ಟು ಮಹಿಳೆಯರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅಂಥ ಮಹಿಳೆಯರ ಕುರಿತು ಈ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಅದೇ ಕಾರಣಕ್ಕೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ' ಎನ್ನುತ್ತಾರೆ.
'ಇಂದು ದೊಡ್ಡವರಷ್ಟೇ ಅಲ್ಲ, ಸಣ್ಣ ಮಕ್ಕಳು ಸಹ ಕುಡಿಯುವ ವೀಡಿಯೋಗಳು ಬಿಡುಗಡೆಯಾಗಿ ಎಲ್ಲರಿಗೂ ಆಘಾತ ತಂದಿದೆ. ಈ ಚಿತ್ರದಲ್ಲಿ 'ಸಾರಾಯಂ ಅಭಯಂ' ಎಂಬ ಹಾಡಿದ್ದು, ಕುಡಿತದ ವಿರುದ್ಧದ ಅಭಿಯಾನದಲ್ಲಿ ಬಳಸಿಕೊಳ್ಳಬಹುದು. ಜನ ಮತ ಚಲಾಯಿಸುತ್ತಾರೋ, ಇಲ್ಲವೋ ಎಂಬ ಭಯದಿಂದ ಯಾವ ರಾಜಕಾರಿಣಿಯೂ ಕುಡಿತವನ್ನು ನಿಷೇಧಿಸುವ ಮಾತಾಡುವುದಿಲ್ಲ. ಅವರ ಭಾಷಣಗಳಲ್ಲಿ, ಮಾತುಗಳಲ್ಲಿ ಕುಡಿತ ಕುರಿತು ಪ್ರಸ್ತಾಪವೇ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಸಾರಾಯಿ ತರಹ ಗಾಂಜ ಅಂಗಡಿಗಳು ಪ್ರಾರಂಭವಾದರೂ ಆಶ್ಚರ್ಯವಿಲ್ಲ. ಆಗಾಗ ಆನ್ಲೈನ್ ರಮ್ಮಿಯಿಂದ ಜನ ಸಾಯುವ ಬಗ್ಗೆ ಕೇಳುತ್ತಿರುತ್ತೇವೆ. ಆದರೆ, ಕುಡಿತದಿಂದ ಪ್ರತೀ ದಿನ ನೂರಾರು ಜನ ಸಾಯುತ್ತಿದ್ದಾರೆ. ಆನ್ಲೈನ್ ರಮ್ಮಿಯನ್ನು ನಿಷೇಧಿಸಬೇಕು ಎನ್ನುವವರು ಕುಡಿತವನ್ನು ನಿಷೇಧಿಸಬೇಕು ಎಂದು ಆಗ್ರಹಿಸುವುದಿಲ್ಲ. ಮಹಿಳೆಯರಿಗೆ ಸಾವಿರಾರು ರೂಪಾಯಿ ಬೇಕಿಲ್ಲ. ಅವರಿಗೆ ಎಸಿ ಬಸ್ ಬೇಕಿಲ್ಲ. ನೀಟ್ ಪರೀಕ್ಷೆಗಳು ಮುಖ್ಯವಲ್ಲ. ಜನಸಾಮಾನ್ಯರಿಗೆ ಸಮಸ್ಯೆ ಆಗಿರುವ ಸಾರಾಯಿಯನ್ನು ಮೊದಲು ನಿಷೇಧಿಸಿ' ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಾಜಿ ಪತ್ನಿ-ಸಹೋದರನ ವಿರುದ್ಧ 100ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ
ಈ ಚಿತ್ರಕ್ಕೆ ಮಂಜುನಾಥ ಅವರ ಛಾಯಾಗ್ರಹಣ ಮತ್ತು ರವಿವರ್ಮ ಸಂಗೀತವಿದೆ. ಪ್ರೇಮ್ ಹಿನ್ನೆಲೆ ಸಂಗೀತ ಸಂಯೋಜಿಸಿದರೆ, ಜೂಲಿಯನ್ ಸಂಕಲನಕಾರರಾಗಿ ದುಡಿದಿದ್ದಾರೆ. ಚಿತ್ರವನ್ನು ಕೆ.ಎನ್.ಆರ್. ರಾಜ ನಿರ್ಮಿಸಿದ್ದಾರೆ.