ಸಿನಿವಾಣಿ

ತೆಲುಗಿನಲ್ಲಿ ವಸಿಷ್ಠಸಿಂಹ ಬಿಜಿ; ಮೂರು ಚಿತ್ರಗಳಲ್ಲಿ ನಾಯಕನಾಗಿ ನಟನೆ

ಬೆಂಗಳೂರು: ‘ಓದೆಲ್ಲ ರೈಲ್ವೇ ಸ್ಟೇಷನ್’ ಎಂಬ ಚಿತ್ರದಲ್ಲಿ ವಸಿಷ್ಠ ಸಿಂಹ ನಟಿಸುತ್ತಿರುವುದು ಗೊತ್ತೇ ಇದೆ. ಅದಲ್ಲದೆ ಅವರು ಇನ್ನೂ ಮೂರು ತೆಲುಗು ಚಿತ್ರಗಳಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶೂಟಿಂಗ್​ಗಾಗಿ ಹೈದರಾಬಾದ್​ನಲ್ಲಿ ಬೀಡುಬಿಟ್ಟಿರುವ ವಸಿಷ್ಠ, ಮಂಗಳವಾರ ಮಧ್ಯಾಹ್ನ ಬೆಂಗಳೂರಿಗೆ ವಾಪಸಾಗಿದ್ದಾರೆ. ಅದಕ್ಕೆ ಕಾರಣ, ಮಂಗಳವಾರ ಅವರ ಹುಟ್ಟುಹಬ್ಬವಿತ್ತು. ಈ ಹುಟ್ಟುಹಬ್ಬವನ್ನು ಅಭಿಮಾನಿಗಳ ಜತೆಗೆ ಆಚರಿಸಿಕೊಂಡ ವಸಿಷ್ಠ, ನಂತರ ತಮ್ಮ ಹೊಸ ಚಿತ್ರಗಳ ಬಗ್ಗೆ ‘ವಿಜಯವಾಣಿ’ ಜತೆಗೆ ಹಲವು ವಿಷಯಗಳನ್ನು ಹಂಚಿಕೊಂಡರು.

‘ಓದೆಲ್ಲ ರೈಲ್ವೇ ಸ್ಟೇಶನ್’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮುಂದಿನ ವಾರ ಅಧಿಕೃತವಾಗಿ ಬಿಡುಗಡೆಯ ದಿನಾಂಕ ಘೋಷಣೆಯಾಗಲಿದೆ. ಇದಲ್ಲದೆ ‘ಸಿಂಬ’, ‘ಸೋಲ್’ ಮತ್ತು ‘ನಯೀಮ್ ಡೈರೀಸ್’ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಸದ್ಯ ‘ಸಿಂಬ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಅಲ್ಲಿಂದಲೇ ಬಂದಿದ್ದೇನೆ’ ಎನ್ನುತ್ತಾರೆ ವಸಿಷ್ಠ. ‘ಸಿಂಬ ಚಿತ್ರದಲ್ಲಿ ವಸಿಷ್ಠ ಜತೆಗೆ ಜಗಪತಿ ಬಾಬು, ಗೌತಮಿ, ಅನುಸೂಯ ಮುಂತಾದವರು ನಟಿಸುತ್ತಿದ್ದು, ಸಂಪತ್ ನಂದಿ ಮತ್ತು ರಾಜೇಂದ್ರ ರೆಡ್ಡಿ ಜತೆಯಾಗಿ ನಿರ್ವಿುಸುತ್ತಿದ್ದಾರಂತೆ. 10 ವರ್ಷಗಳ ಕಾಲ ಇಂಗ್ಲೆಂಡ್​ನಲ್ಲಿದ್ದು, ಅಲ್ಲಿ ಹಲವು ಇಂಗ್ಲೀಷ್ ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿರುವ ಮುರಳಿ ಮನೋಹರ್ ರೆಡ್ಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರಂತೆ.

ಇನ್ನು, ‘ಸೋಲ್’ ಎಂಬುದು ಪರಿಸರ ರಕ್ಷಣೆ ಕುರಿತಾದ ಚಿತ್ರವಂತೆ. ‘ಮರ್ಡರ್ ಮಿಸ್ಟ್ರಿಯಿಂದ ಪ್ರಾರಂಭವಾಗುವ ಚಿತ್ರ ನಂತರ ಹಲವು ರೂಪಗಳನ್ನು ಪಡೆಯುತ್ತದೆ. ಇಲ್ಲಿ ಥ್ರಿಲ್ ಇದೆ, ಮನರಂಜನೆ ಇದೆ. ಅರಣ್ಯ ಸಂರಕ್ಷಣೆ ಕುರಿತಾದ ಸಂದೇಶವೂ ಇದೆ. ಇದಲ್ಲದೆ, ‘ನಯೀಮ್ ಡೈರೀಸ್’ ಎಂಬ ಗ್ಯಾಂಗ್​ಸ್ಟರ್ ಬಯೋಪಿಕ್​ನಲ್ಲೂ ನಟಿಸುತ್ತಿದ್ದೇನೆ’ ಎನ್ನುತ್ತಾರೆ ವಸಿಷ್ಠ. ಕನ್ನಡದ ವಿಷಯಕ್ಕೆ ಬಂದರೆ, ‘ಕಾಲಚಕ್ರ’ ಬಿಡುಗಡೆಗೆ ಕಾದಿರುವ ವಸಿಷ್ಠ, ‘ಹೆಡ್​ಬುಷ್’, ‘ತಲ್ವಾರ್​ಪೇಟೆ’ ಮತ್ತು ‘ಎವರು’ ಚಿತ್ರದ ರಿಮೇಕ್​ನಲ್ಲಿ ನಟಿಸುತ್ತಿದ್ದು, ಆ ಚಿತ್ರಗಳ ಚಿತ್ರೀಕರಣ ಇನ್ನಷ್ಟೇ ಮುಗಿಯಬೇಕಿದೆ.