ಸಿನಿವಾಣಿ

ವೇದಿಕೆಯ ಮೇಲೇ ವನಿತಾಗೆ ಅವಮಾನಿಸಿದ ರಮ್ಯಾ ಕೃಷ್ಣ!? ಡ್ಯಾನ್ಸ್ ಶೋನಿಂದ ಹೊರಬಂದ ನಟಿ ಹೇಳಿದ್ದೇನು?

ಚೆನ್ನೈ: ನಟಿ, ಬಿಗ್​ಬಾಸ್ ಮಾಜಿ ಸ್ಪರ್ಧಿ ವನಿತಾ ವಿಜಯ್​ಕುಮಾರ್ ಇತ್ತೀಚೆಗೆ ಬಿಗ್​ಬಾಸ್ ಜೋಡಿಗಳ್ ಹೆಸರಿನ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ನಟಿ ಆ ಶೋನಿಂದ ಹೊರಬಂದಿದ್ದಾರೆ. ಅದಕ್ಕೆ ಕಾರಣ ನಟಿ ರಮ್ಯಾ ಕೃಷ್ಣ ಎನ್ನಲಾಗಿದೆ.

ಬಿಗ್​ಬಾಸ್​ನಲ್ಲಿ ಸ್ಪರ್ಧಿಸಿ ಬಂದಿರುವ ಮಾಜಿ ಸ್ಪರ್ಧಾಳುಗಳಿಗಾಗಿ ಬಿಗ್​ಬಾಸ್ ಜೋಡಿಗಳ್ ಡ್ಯಾನ್ಸಿಂಗ್ ರಿಯಾಲಿಟಿ ಶೋ ನಡೆಸಲಾಗುತ್ತಿದೆ. ಆ ಶೋಗೆ ನಟಿ ರಮ್ಯಾ ಕೃಷ್ಣಾ ಮತ್ತು ನಕುಲ್ ಜಯದೇವ್ ತೀರ್ಪುಗಾರರಾಗಿದ್ದಾರೆ. ಅದರ ಸ್ಪರ್ಧಾಳುವಾಗಿರುವ ವನಿತಾ ವಿಜಯ್​ಕುಮಾರ್ ಇತ್ತೀಚೆಗೆ ನೀಡಿದ ಪರ್ಫಾಮೆನ್ಸ್​ಗೆ ರಮ್ಯಾ ಕೃಷ್ಣ 10ಕ್ಕೆ ಒಂದು ಅಂಕ ಕೊಟ್ಟಿದ್ದಾರೆ. ಅದನ್ನೇ ಅವಮಾನವೆಂದುಕೊಂಡಿರುವ ವನಿತಾ ಶೋ ಬಿಟ್ಟು ಹೊರಗೆ ಬಂದಿರುವುದಾಗಿ ಹೇಳಲಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ವನಿತಾ, ""ಎಲ್ಲ ರೀತಿಯಲ್ಲೂ ನಿಮಗೆ ಹಿರಿಯರಾಗಿರುವವರು ಅವರ ದಾರಿಯಲ್ಲಿ ಹೆಣಗಾಡುತ್ತಿರುವ ಯುವಕರನ್ನು ಕೀಳಾಗಿ ನೋಡುವುದು, ಅವರನ್ನು ಅವಮಾನಿಸುವುದು ಮತ್ತು ನಿರುತ್ಸಾಹಗೊಳಿಸುವುದು ನನಗೆ ಸಂಕಟ ಉಂಟುಮಾಡಿದೆ. ವಿಶೇಷವಾಗಿ 3 ಮಕ್ಕಳ ತಾಯಿ ಆಜೀವ ಹೋರಾಟದ ನಂತರ ಯಾವುದೇ ಕುಟುಂಬ ಅಥವಾ ಗಂಡನ ಬೆಂಬಲವಿಲ್ಲದೆ ಸಾಧಿಸುವುದು ಮತ್ತು ಯಶಸ್ವಿಯಾಗುವುದು ಸಾಮಾನ್ಯ ವಿಚಾರವಲ್ಲ. ಮಹಿಳೆಯರು ಇತರ ಮಹಿಳೆಯರೊಂದಿಗೆ ನಿಲ್ಲಬೇಕು, ಅವರ ಜೀವನವನ್ನು ಶೋಚನೀಯವಾಗಿಸಬಾರದು." ಎಂದು ಬರೆದುಕೊಂಡಿದ್ದಾರೆ. ಅದರೊಂದಿಗೆ ನಾನು ಬಿಗ್​ಬಾಸ್ ಜೋಡಿಗಳ್ ರಿಯಾಲಿಟಿ ಶೋನಿಂದ ಹೊರಬಂದಿದ್ದೇನೆ. ಅವಕಾಶ ನೀಡಿದವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಈ ವಿಚಾರವಾಗಿ ನಟಿ ರಮ್ಯಾ ಕೃಷ್ಣಾ ಕೂಡ ಮಾತನಾಡಿದ್ದಾರೆ. ಈ ವಿಚಾರವನ್ನು ನೀವು ವನಿತಾ ಬಳಿಯೇ ಕೇಳಬೇಕು. ನನಗೆ ಆಕೆ ಒಂದು ಸಮಸ್ಯೆ ಎನಿಸುವುದೇ ಇಲ್ಲ. ಇದರ ಬಗ್ಗೆ ನಾನು ಬೇರೇನೂ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)