ಸಿನಿವಾಣಿ

‘ಮುದ್ದು ರಾಕ್ಷಸಿ’ ರೀಷ್ಮಾ; ವಾಮನ ಹಾಡು ಬಿಡುಗಡೆ ಮಾಡಿದ ಅಭಿಷೇಕ್ ಅಂಬರೀಶ್

ಬೆಂಗಳೂರು: ಧನ್ವೀರ್ ಮತ್ತು ರೀಷ್ಮಾ ನಾಣಯ್ಯ ನಟಿಸಿರುವ ‘ವಾಮನ’ ಚಿತ್ರದ ಎರಡನೇ ಹಾಡು ರಿಲೀಸ್ ಆಗಿದೆ. ‘ಮುದ್ದು ರಾಕ್ಷಸಿ..’ ಎಂದು ಸಾಗುವ ಈ ರೊಮ್ಯಾಂಟಿಕ್ ಸಾಂಗ್ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ವಿಜಯ್ ಪ್ರಕಾಶ್ ಮತ್ತು ಹರ್ಷಿಕಾ ದೇವನಾಥ್ ಕಂಠಸಿರಿಯಲ್ಲಿ ಮೂಡಿಬಂದಿದೆ.

ಹಾಡನ್ನು ಬಿಡುಗಡೆ ಮಾಡಿದ ನಟ ಅಭಿಷೇಕ್ ಅಂಬರೀಶ್, ‘ಹಾಡೊಂದು ಹಿಟ್ ಆಗಬೇಕೆಂದರೆ ಅದರ ಕ್ರೆಡಿಟ್ ನಾಯಕ ಅಥವಾ ನಾಯಕಿ ಬದಲಿಗೆ ಸಂಗೀತ ನಿರ್ದೇಶಕ, ಸಾಹಿತಿಗೆ ಸಲ್ಲಬೇಕು. ಧನ್ವೀರ್ ಇಷ್ಟು ಚೆನ್ನಾಗಿ ರೊಮ್ಯಾನ್ಸ್ ಮಾಡುತ್ತಾನೆ ಅಂತ ಗೊತ್ತಿರಲಿಲ್ಲ. ‘ಬೈಟು ಲವ್’ ಚಿತ್ರದಲ್ಲಿ ಸ್ವಲ್ಪ ನೋಡಿದ್ದೆ. ಈಗ ‘ವಾಮನ’ ಚಿತ್ರದಲ್ಲಿ ಕಂಪ್ಲೀಟ್ ಕಮರ್ಷಿಯಲ್ ಪ್ಯಾಕೇಜ್, ಕ್ಯೂಟ್ ಲವರ್‌ಬಾಯ್ ರೀತಿ ಕಾಣಿಸುತ್ತಾರೆ’ ಎಂದು ಚಿತ್ರತಂಡಕ್ಕೆ ಶುಭಹಾರೈಸಿದರು. ನಾಯಕ ಧನ್ವೀರ್, ನೃತ್ಯನಿರ್ದೇಶಕ ಭೂಷಣ್ ಮಾಸ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಂಕರ್ ರಾಮನ್ ಚೊಚ್ಚಲ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರವಿದು. ಧನ್ವೀರ್, ರೀಷ್ಮಾ ಜತೆ ತಾರಾ, ಸಂಪತ್, ಆದಿತ್ಯ ಮೆನನ್, ಶಿವರಾಜ್ ಕೆಆರ್ ಪೇಟೆ, ಅವಿನಾಶ್, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ, ಭೂಷಣ್ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನವಿರಲಿದೆ.