ಶಿಡ್ಲಘಟ್ಟ: 27 ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು ಉಪೇಂದ್ರ ನಿರ್ದೇಶನದ, ಶಿವರಾಜಕುಮಾರ್ ಅಭಿನಯದ 'ಓಂ'. ಆ ಚಿತ್ರದ ನಂತರ ಶಿವಣ್ಣ ಮತ್ತು ಉಪೇಂದ್ರ ಯಾವಾಗ ಇನ್ನೊಂದು ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆ ಕೇಳಿ ಬರುತ್ತಲೇ ಇದೆ. ಆದರೆ, ಆ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿರಲಿಲ್ಲ. ಶಿವಣ್ಣ ಅಭಿನಯದಲ್ಲಿ ಆದಷ್ಟು ಬೇಗ ಸಿನಿಮಾ ಮಾಡುವುದಾಗಿ ಇದೀಗ ಉಪೇಂದ್ರ ಘೋಷಿಸಿದ್ದಾರೆ.
ಭಾನುವಾರ ಶಿಡ್ಲಘಟ್ಟದಲ್ಲಿ ನಡೆದ 'ಕಬ್ಜ' ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಮತ್ತದೇ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರ ನೀಡಿದ ಉಪೇಂದ್ರ, ನಿರ್ಮಾಪಕರು ರೆಡಿ ಇದ್ದು, ಆದಷ್ಟು ಬೇಗ ಚಿತ್ರ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಮೊದಲು ಮಾತನಾಡಿದ ಶಿವರಾಜಕುಮಾರ್, ''ಓಂ'ನಂತಹ ಸಿನಿಮಾ ಬರದಿದ್ದರೆ ಭಾರತದಲ್ಲಿ ಭೂಗತಲೋಕದ ಕುರಿತಾದ ಸಿನಿಮಾಗಳು ಬರುತ್ತಿರಲಿಲ್ಲ. ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಭೂಗತಲೋಕದ ಕುರಿತು ಚಿತ್ರ ಮಾಡಿದರು. ಅದು ನಮ್ಮ ಹೋಂ ಪ್ರೊಡಕ್ಷನ್ನಲ್ಲಿ ನಿರ್ಮಾಣವಾಗಿದ್ದು, ಅದರಲ್ಲಿ ನಾನು ನಟಿಸಿದ್ದು ನನ್ನ ಭಾಗ್ಯ. ಇವತ್ತಿಗೂ 'ಓಂ' ಚಿತ್ರವನ್ನು ಮರೆಯೋಕೆ ಆಗಲ್ಲ. ದಾಖಲೆಗಳನ್ನು ಒಂದು ಸಾರಿ ಮಾತ್ರ ಮಾಡಬಹುದು. ಅದು ಉಪೇಂದ್ರ ಬರೆದರು. ನಾನು ಅವರ ನಿರ್ದೇಶನಕ್ಕೆ ದೊಡ್ಡ ಫ್ಯಾನ್. ಉಪೇಂದ್ರ ಕೈಗೆ ಲಾಂಗ್ ಕೊಟ್ಟುಬಿಟ್ಟರು. ಈಗ ಎಲ್ಲರೂ ಲಾಂಗ್ ಸಿನಿಮಾನೇ ಮಾಡಿ ಎನ್ನುತ್ತಾರೆ' ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಉಪೇಂದ್ರ, 'ನಿರ್ಮಾಪಕರು ರೆಡಿ ಇದ್ದಾರೆ. ಗೀತಕ್ಕ ಅವರು ಯಾವಾಗಲೂ ನಮ್ಮ ಪ್ರೊಡಕ್ಷನ್ನಲ್ಲಿ ಸಿನಿಮಾ ಮಾಡಿ ಅಂತ ಹೇಳುತ್ತಿರುತ್ತಾರೆ. ಖಂಡಿತಾ ಮಾಡುತ್ತೇನೆ. ಎಷ್ಟು ಬೇಗ ಸಾಧ್ಯವೋ, ಅಷ್ಟು ಬೇಗ ನಾವು ಒಟ್ಟಿಗೆ ಬರ್ತೀವಿ. ಏಕೆಂದರೆ, ಒಂದು ಅವಕಾಶವನ್ನು ನಾನು ಕಳೆದುಕೊಂಡುಬಿಟ್ಟೆ. ಅಪ್ಪುಗೆ ಒಂದು ಸಿನಿಮಾ ಮಾಡಬೇಕಿತ್ತು. ಆ ಅವಕಾಶವನ್ನು ಕಳೆದುಕೊಂಡೆ. ಶಿವಣ್ಣ ಅವರಲ್ಲಿ ಎಲ್ಲರನ್ನೂ ನೋಡ್ತೀವಿ ನಾವು. ಖಂಡಿತಾ ಆದಷ್ಟು ಬೇಗ ಅವರನ್ನು ಡೈರೆಕ್ಟ್ ಮಾಡ್ತೀನಿ ನಾನು' ಎಂದು ಘೋಷಿಸಿದರು.