ಸಿನಿವಾಣಿ

ಉಪೇಂದ್ರ ಜತೆ ಹರಿಪ್ರಿಯಾ; ‘ಲಗಾಮ್​ಗೂ ಮುನ್ನ ಶಶಾಂಕ್ ಚಿತ್ರದಲ್ಲಿ...

ಬೆಂಗಳೂರು: ಉಪೇಂದ್ರ ಅಭಿನಯದ ಹೊಸ ಚಿತ್ರದ ಬಗ್ಗೆ ಸದ್ಯದಲ್ಲೇ ಇನ್ನಷ್ಟು ಮಾಹಿತಿ ಕೊಡುವುದಾಗಿ, ಕಳೆದ ಸೆಪ್ಟೆಂಬರ್​ನಲ್ಲೇ ಹೇಳಿದ್ದರು ನಿರ್ದೇಶಕ ಶಶಾಂಕ್. ಆ ಸುದ್ದಿಯನ್ನು ಅವರು ಈಗ ಕೊಟ್ಟಿದ್ದು, ಏಪ್ರಿಲ್ 22ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಅಷ್ಟೇ ಅಲ್ಲ, ಚಿತ್ರತಂಡಕ್ಕೆ ಇದೀಗ ನಾಯಕಿಯಾಗಿ ಹರಿಪ್ರಿಯಾ ಅವರ ಸೇರ್ಪಡೆಯಾಗಿದೆ. ಹರಿಪ್ರಿಯಾ ಅವರಿಗೆ ಬಹಳ ಸಮಯದಿಂದ ಉಪೇಂದ್ರರ ಜತೆಗೆ ನಟಿಸುವ ಆಸೆ ಇತ್ತಂತೆ. ‘ಲಗಾಮ್ ಎಂಬ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದರೂ, ಅದಕ್ಕೂ ಮೊದಲೇ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆಯಂತೆ. ‘ಇದರಲ್ಲಿ ನನ್ನದು ವಿಭಿನ್ನವಾದ ಪಾತ್ರ. ಈಗಿನ ಕಾಲಘಟ್ಟಕ್ಕೆ ಸೂಕ್ತವಾಗುವಂತಹ ಪ್ರಾಕ್ಟಿಕಲ್ ಹುಡುಗಿಯ ಪಾತ್ರ. ಉಪೇಂದ್ರ ಹಾಗೂ ಶಶಾಂಕ್ ಇಬ್ಬರ ಜತೆಗೂ ನನಗೆ ಇದು ಮೊದಲ ಚಿತ್ರ. ಈ ಸಿನಿಮಾದ ಮೂಲಕ ನನ್ನ ಬಹುದಿನಗಳ ಎರಡು ಕನಸು ನನಸಾಗುತ್ತಿದೆ’ ಎನ್ನುತ್ತಾರೆ ಹರಿಪ್ರಿಯಾ.

ತಮ್ಮ ಹೊಸ ಚಿತ್ರದ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಶಶಾಂಕ್, ‘ಏಪ್ರಿಲ್ 22ರಿಂದ ಬೆಳಗಾವಿಯಲ್ಲಿ ಮೊದಲ ಹಂತದ 25 ದಿನಗಳ ಚಿತ್ರೀಕರಣ ನಡೆಯಲಿದೆ. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ನನ್ನ ಮತ್ತು ಉಪೇಂದ್ರ ಅವರ ಶೈಲಿಯಲಿರುತ್ತದೆ. ಉಪೇಂದ್ರ ಶೈಲಿಯ ಚಿತ್ರಕಥೆ, ನನ್ನ ಸ್ಟೈಲಿನ ಎಮೋಷನ್ಸ್ ಇರುವಂತಹ ಚಿತ್ರ ಇದು. ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ತೆರೆಗೆ ಬರಲಿದೆ’ ಎನ್ನುತ್ತಾರೆ ಶಶಾಂಕ್. ಇನ್ನು, ಕಳೆದ ವರ್ಷ ಉಪೇಂದ್ರ ಅಭಿನಯದಲ್ಲಿ ಚಿತ್ರವೊಂದರ ಮುಹೂರ್ತ ಮಾಡಿದ್ದರು ಶಶಾಂಕ್. ಆದರೆ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ಅವರು. ‘ಆ ಕಥೆಯೇ ಬೇರೆ. ಈ ಕಥೆಯೇ ಬೇರೆ. ಅಲ್ಲಿ ಇಬ್ಬರು ನಾಯಕಿಯರಿದ್ದರು. ಇಲ್ಲಿ ಹರಿಪ್ರಿಯಾ ಒಬ್ಬರೇ ನಾಯಕಿ. ಮಿಕ್ಕಂತೆ ದೇವರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್ ಹಲವು ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿದ್ದಾರೆ’ ಎನ್ನುತ್ತಾರೆ ಶಶಾಂಕ್.