ಸಿನಿವಾಣಿ

'ಬುದ್ದಿವಂತ' ನಟನ ಜನ್ಮದಿನಕ್ಕೆ ರಿಲೀಸ್​ ಆಗಲಿದೆ 'ಯುಐ' ಟೀಸರ್; ಹೆಚ್ಚಾಯ್ತು ಉಪ್ಪಿ ಫ್ಯಾನ್ಸ್​ಗಳ ಕಾತರ

ಮೋಹನ್​ ಶೆಟ್ಟಿ

ಬೆಂಗಳೂರು: ಸ್ಯಾಂಡಲ್​ವುಡ್​ನ ರಿಯಲ್​ ಸ್ಟಾರ್​, ನಟ ಉಪೇಂದ್ರ ಅವರ ಬಹುನಿರೀಕ್ಷಿತ 'ಯುಐ' ಚಿತ್ರದ ಟೀಸರ್​ ರಿಲೀಸ್​ ದಿನಾಂಕ ಇಂದು ಅಧಿಕೃತವಾಗಿ ಪ್ರಕಟಗೊಂಡಿದ್ದು, ನಟನ ಜನ್ಮದಿನಕ್ಕೆ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ.

ಕಳೆದ ತಿಂಗಳಷ್ಟೇ ಉಪೇಂದ್ರ ಅವರು ತಮ್ಮ ಮುಂಬರುವ ಪ್ಯಾನ್ ಇಂಡಿಯಾ ಚಿತ್ರವಾದ 'ಯುಐ' ಚಿತ್ರದ ಕಿರು ವಿಡಿಯೋ ತುಣುಕನ್ನು ವಿಭಿನ್ನವಾಗಿ ಬಿಡುಗಡೆಗೊಳಿಸಿದ್ದರು. ಈ ಮುಖೇನ ಚಿತ್ರರಸಿಕರಲ್ಲಿ ಮತ್ತು ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲ ಮೂಡಿಸಿದ್ದರು. ಸದ್ಯ ಇದೀಗ ಚಿತ್ರದ ಅಧಿಕೃತ ಟೀಸರ್​ ಅನ್ನು ಸೆಪ್ಟಂಬರ್​ 18 ರಂದು ರಿಲೀಸ್​ ಮಾಡಲು ಚಿತ್ರ ತಯಾರಕರು ಮುಂದಾಗಿದ್ದಾರೆ.

ಕಳೆದ ಹಲವು ದಿನಗಳಿಂದ 'ಯುಐ' ಚಿತ್ರದ ಬಗ್ಗೆ ಹೊಸ ಮಾಹಿತಿ ಪಡೆಯಲು ತೀವ್ರ ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ಟೀಸರ್ ರಿಲೀಸ್​ ಡೇಟ್​ ಕೇಳಿ ಭಾರೀ ಸಂತಸ ಉಂಟಾಗಿದೆ. ಸೆಪ್ಟೆಂಬರ್ 18, 2023 ರಂದು ಬೆಂಗಳೂರಿನ ಊರ್ವಶಿ ಥಿಯೇಟರ್‌ನಲ್ಲಿ ಮಧ್ಯಾಹ್ನ 3 ಗಂಟೆಗೆ ಆಫ್‌ಲೈನ್ ಪ್ರೀಮಿಯರ್ ಪ್ರದರ್ಶಿಸುವ ಮೂಲಕ ಸಿನಿಮಾದ ಟೀಸರ್​ ಅನ್ನು ನಟ ಉಪೇಂದ್ರ ಅನಾವರಣಗೊಳಿಸಲಿದ್ದಾರೆ.

ಲಹರಿ ಫಿಲ್ಮ್ಸ್ ಮತ್ತು ವೀನಸ್ ಎಂಟರ್‌ಟೈನ್​ಮೆಂಟ್​ ಬ್ಯಾನರ್‌ನಲ್ಲಿ ಮೂಡಿಬಂದಿರುವ ಚಿತ್ರದ ಬಿಡುಗಡೆಯತ್ತ ಹೆಚ್ಚು ಕಾತರದಿಂದ ಕಾಯುತ್ತಿರುವ ಉಪೇಂದ್ರ ಅಭಿಮಾನಿಗಳು, ಹಲವು ವರ್ಷಗಳ ನಂತರ ಮತ್ತೊಮ್ಮೆ ನಿರ್ದೇಶನಕ್ಕೆ ಮರಳಿರುವ ಡಿಫರೆಂಟ್​ ಡೈರೆಕ್ಟರ್​ ಈ ಚಿತ್ರದಲ್ಲಿ ಹೇಗೆಲ್ಲಾ ನಿರ್ದೇಶನ ಮಾಡಿರಬಹುದು ಎಂಬ ನಿರೀಕ್ಷಗೆಳನ್ನು ವ್ಯಕ್ತಪಡಿಸಿದ್ದಾರೆ.