| ಮಂಜು ಕೊಟಗುಣಸಿ ಬೆಂಗಳೂರು
ಸದಾ ಒಂದಿಲ್ಲೊಂದು ಕೆಲಸಗಳಲ್ಲಿ ಬಿಜಿಯಾಗುತ್ತ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಅತ್ತಿಂದಿತ್ತ ಓಡಾಡುತ್ತಿದ್ದ ಸಿನಿಮಾ ಮಂದಿಗೆ ಕಳೆದ ಎರಡೂವರೆ ತಿಂಗಳಿಂದ ಕೈ ಕಟ್ಟಿ ಕೂರಿಸಿದೆ ಕರೊನಾ ಲಾಕ್ಡೌನ್. ಹಾಗಂತ ಆ ಅವಧಿಯಲ್ಲಿ ಸುಮ್ಮನೆ ಕುಳಿತಿಲ್ಲ. ಹೊಸ ಹೊಸ ಚಟುವಟಿಕೆಗಳಿಗೆ ಅಂಟಿಕೊಂಡಿದ್ದಾರೆ. ಎಂದೂ ಮಾಡದ, ಗೊತ್ತೇ ಇಲ್ಲದ ಕೆಲಸಗಳತ್ತ ಮುಖಮಾಡಿದ್ದಾರೆ. ಅದೇ ರೀತಿ ‘ಪ್ಯಾರ್ಗೆ ಆಗ್ಬುಟೈತೆ ...’ ಬೆಡಗಿ ಪಾರೂಲ್ ಯಾದವ್ ಸಹ ಹೊಸ ಕಾರ್ಯದಲ್ಲಿ ತೊಡಗಿಸಿಕೊಂಡು, ಯಶಸ್ವಿಯಾಗಿದ್ದಾರೆ. ಹೌದು, ಲಾಕ್ಡೌನ್ ಅವಧಿಯಲ್ಲಿ ಸದ್ದಿಲ್ಲದೆ, ಎರಡು ಕಥೆಗಳನ್ನು ಬರೆದು ಮುಗಿಸಿದ್ದಾರೆ. ಆ ಎರಡು ಕಥೆಗಳನ್ನೂ ಲಾಕ್ಡೌನ್ನಲ್ಲೇ ಲಾಕ್ ಮಾಡಿದ್ದು, ಸಿನಿಮಾ ಕೆಲಸಗಳಿಗೆ ಸಂಪೂರ್ಣ ಅನುಮತಿ ಸಿಗುತ್ತಿದ್ದಂತೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಪಾರೂಲ್.
ಕೆಲವು ವರ್ಷಗಳ ಹಿಂದೆಯೇ ಹೊಳೆದಿದ್ದ ಎಳೆಗೆ ಇದೀಗ ಕಥೆ ಬರೆದಿದ್ದಾರೆ ಪಾರೂಲ್. ‘ನಾನು ನಟಿ. ನಟನೆಗೆ ನನ್ನ ಮೊದಲ ಆದ್ಯತೆ. ಆದರೆ, ಲಾಕ್ಡೌನ್ನಿಂದಾಗಿ ಶೂಟಿಂಗ್ ನಿಂತು ಹೋಯಿತು. ಯಾವಾಗ ಶುರು ಎಂಬ ಬಗ್ಗೆಯೂ ಮಾಹಿತಿ ಇರಲಿಲ್ಲ. ಆಗ ನನಗೆ ಕಥೆ ಬರೆಯುವ ಮನಸ್ಸಾಯಿತು. ಹಲವು ವರ್ಷಗಳ ಹಿಂದೆ ಹೊಳೆದಿದ್ದ ಸಣ್ಣ ಎಳೆಗೆ ಕಥೆ ಬರೆಯಲು ಆರಂಭಿಸಿದೆ. ದಿನದಿಂದ ದಿನಕ್ಕೆ ಒಳ್ಳೊಳ್ಳೆ ಕಂಟೆಂಟ್ ಸಿಗುತ್ತ ಹೋಯಿತು. ಲಾಕ್ಡೌನ್ನ ಕ್ವಾಲಿಟಿ ಸಮಯವನ್ನು ಬಳಸಿಕೊಂಡು, ಒಟ್ಟಾರೆಯಾಗಿ ಎರಡು ಕಥೆ ಬರೆದೆ. ಕನಸಿನಲ್ಲೂ ನಾನು ಕಥೆ ಬರೆಯುತ್ತೇನೆ ಅಂದುಕೊಂಡಿರಲಿಲ್ಲ. ಅದು ಈ ಸಮಯದಲ್ಲಿ ಈಡೇರಿದೆ. ಕನ್ನಡ, ಹಿಂದಿ ಮತ್ತು ತಮಿಳಿನಲ್ಲಿ ಈ ಎರಡು ಕಥೆಗಳಿಗೆ ನಾನೇ ಬಂಡವಾಳ ಹೂಡಿ ಸಿನಿಮಾ ಮಾಡಲಿದ್ದೇನೆ’ ಎನ್ನುತ್ತಾರೆ ಪಾರೂಲ್.
ಈಗಾಗಲೇ ಸಿನಿಮಾ ನಿರ್ಮಾಣ ಮಾಡಿ ಸೈ ಎನಿಸಿ ಕೊಂಡಿರುವ ಪಾರೂಲ್, ಮುಂದಿನ ದಿನಗಳಲ್ಲಿ ವೆಬ್ ಸಿರೀಸ್ ನಿರ್ವಿುಸುವ ಗುರಿ ಹೊಂದಿದ್ದಾರೆ. ‘ಪ್ರಸ್ತುತ ವೆಬ್ ಸಿರೀಸ್ ಕಡೆ ಎಲ್ಲರ ಗಮನ ಇದೆ. ವೀಕ್ಷಣೆ ಪ್ರಮಾಣ ಮೊದಲಿನದ್ದಕ್ಕಿಂತ ಹೆಚ್ಚಾಗಿದೆ. ಸಿನಿಮಾ ನಿರ್ಮಾಣ ಮಾಡಿದ ನನಗೆ ವೆಬ್ ಸಿರೀಸ್ಗೂ ಬಂಡವಾಳ ಹೂಡುವ ಮನಸ್ಸಿದೆ. ವೆಬ್ ಸರಣಿಗೆ ಬೇಕಾದ ಕಥೆಗಳು ನನ್ನ ಬಳಿ ಇದ್ದು, ಅಮೆಜಾನ್ ಪ್ರೖೆಂ, ನೆಟ್ಪ್ಲಿಕ್ಸ್ಗೆ ಅಪ್ರೋಚ್ ಮಾಡುವ ಯೋಜನೆ ಇದೆ. ಶೀಘ್ರದಲ್ಲಿಯೇ ಆ ಕೆಲಸಗಳೂ ನಡೆಯಲಿವೆ’ ಎನ್ನುವ ಪಾರೂಲ್, ಬಹುಭಾಷೆಯಲ್ಲಿ ವೆಬ್ಸಿರೀಸ್ ನಿರ್ಮಾಣ ಮಾಡಲಿದ್ದಾರಂತೆ. ಇದನ್ನೂ ಓದಿ: ಚಿರು ಸರ್ಜಾ ತಿಥಿ; ಎಲ್ಲಿ, ಯಾವತ್ತು, ಹೇಗೆ ನಡೆಯಲಿದೆ?; ಕರೊನಾ ಹಿನ್ನೆಲೆ ಕುಟುಂಬಸ್ಥರಿಂದ ಕಠಿಣ ನಿರ್ಧಾರ …
ಕಳೆದ ಮೂರು ತಿಂಗಳಿಂದ ಬೆಂಗಳೂರಿನ ಮನೆಯಲ್ಲಿಯೇ ಬಿಡಾರ ಹೂಡಿರುವ ಪಾರೂಲ್, ಮೂರು ತಿಂಗಳ ಅವಧಿಯಲ್ಲಿ ಒಂಚೂರು ಡಿಪ್ರೆಷನ್ಗೆ ಜಾರಿಲ್ಲವಂತೆ. ನಿತ್ಯ ವ್ಯಾಯಾಮ, ಡಯಟ್ ಮಾಡುವುದರ ಜತೆಗೆ, ಅಮ್ಮನ ಕೈ ರುಚಿ ಸವಿಯುತ್ತಿದ್ದಾರಂತೆ. ‘ಇಷ್ಟು ದಿನ ಸಿನಿಮಾ ಕೆಲಸಗಳ ಜತೆಯಲ್ಲಿ ಪಾರ್ಟಿ, ರೆಸ್ಟೋರಂಟ್, ಸುತ್ತಾಟ, ಪ್ರವಾಸ ಎಂದು ಓಡಾಡುತ್ತಿದ್ದೆ. ಆದರೆ, ಲಾಕ್ಡೌನ್ ಅದೆಲ್ಲದಕ್ಕೂ ಕೊಕ್ಕೆ ಹಾಕಿದೆ. ಹಾಗಾಗಿ ಎಲ್ಲಿಯೂ ಹೋಗಿಲ್ಲ. ಮನೆಯಲ್ಲಿಯೇ ಫ್ಯಾಮಿಲಿ ಜತೆಗೆ ಕ್ವಾಲಿಟಿ ಸಮಯವನ್ನು ಕಳೆಯುತ್ತಿದ್ದೇನೆ’ ಎಂಬುದು ‘ಬಟರ್ಫ್ಲೈ’ ಬೆಡಗಿಯ ಮಾತು.
ಕಳೆದ ಎರಡು ವರ್ಷಗಳ ಹಿಂದೆಯೇ ಕನ್ನಡದ ಜತೆಗೆ ಬಹುಭಾಷೆಯಲ್ಲಿ ಬೇರೆ ಬೇರೆ ನಟಿಯರು ನಟಿಸಿರುವ ‘ಕ್ವೀನ್’ ಚಿತ್ರದ ರಿಮೇಕ್ ಇಷ್ಟೊತ್ತಿಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ, ಇನ್ನೂ ಆ ಸಿನಿಮಾಗಳಿಗೆ ರಿಲೀಸ್ ಭಾಗ್ಯ ಸಿಕ್ಕಿಲ್ಲ. ಮತ್ತೆ ಯಾವಾಗ ಬಿಡುಗಡೆ? ‘ಸದ್ಯಕ್ಕೆ ತಮಿಳು ಚಿತ್ರದ ಸೆನ್ಸಾರ್ ಕಾಪಿಗಾಗಿ ಕಾಯುತ್ತಿದ್ದೇನೆ. ಲಾಕ್ಡೌನ್ ತೆರವಾದ ಬಳಿಕ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ರಿಲೀಸ್ನತ್ತ ಗಮನಹರಿಸಲಿದ್ದೇನೆ. ಒಂದು ವೇಳೆ ಇದೇ ಸ್ಥಿತಿ ಮುಂದುವರಿದರೆ, ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡುವ ಲೆಕ್ಕಾಚಾರ ಇದೆ’ ಎಂದು ಮಾಹಿತಿ ನೀಡುತ್ತಾರೆ ಪಾರೂಲ್.