ಕಿರುತೆರೆ ನಟಿಯನ್ನೇ ಅಪಹರಿಸಿದ ಗಂಡ
- ತನ್ನ ಪರಿತ್ಯಕ್ತ ಗಂಡನಿಂದಲೇ ಅಪಹರಣಕ್ಕೊಳದ ಕನ್ನಡ ಕಿರುತೆರೆ ನಟಿ
- ಮಗಳನ್ನು ತನ್ನ ಸುಪರ್ದಿಗೆ ಪಡೆಯುವುದಕ್ಕಾಗಿ ಪತ್ನಿಯನ್ನೇ ಅಪರಿಸಿದ ಗಂಡ
- ಕಿರುತೆರೆ ನಟಿ ಚೈತ್ರಾ ಆರ್ ಸಹೋದರಿ ಲೀಲಾ ಅವರಿಂದ ದೂರು ದಾಖಲು
ಬೆಂಗಳೂರು: ಕಿರುತೆರೆ ಹಾಗೂ ಬೆಳ್ಳಿತೆರೆಯ ನಟಿಯೊಬ್ಬಳು ( Serial Actress ) ತನ್ನ ಪರಿತ್ಯಕ್ತ ಗಂಡನಿಂದಲೇ ಅಪಹರಣಕ್ಕೊಳಗಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮಗಳನ್ನು ತನ್ನ ಸುಪರ್ದಿಗೆ ಪಡೆಯುವುದಕ್ಕಾಗಿ ಪತ್ನಿಯನ್ನು ಅಪಹರಿಸಿರುವುದಾಗಿ ತಿಳಿದುಬಂದಿದೆ.
ನಟಿಯನ್ನು ಚೈತ್ರಾ ಆರ್ ಎಂದು ಗುರುತಿಸಲಾಗಿದೆ. ಆಕೆಯ ಸಹೋದರಿ ಲೀಲಾ ಆರ್ ನೀಡಿರುವ ದೂರಿನ ಪ್ರಕಾರ, ದಾಂಪತ್ಯ ಜೀವನದಲ್ಲಿ ವೈಮನಸ್ಸುಗಳು ಮೂಡಿದ ಪರಿಣಾಮ ಕಳೆದ ಏಳೆಂಟು ತಿಂಗಳಿಂದ ಇಬ್ಬರು ಬೇರೆಯಾಗಿದ್ದಾರೆ. ನಟಿಯಿಂದ ಬೇರೆಯಾಗಿರುವ ಪತಿ ಹರ್ಷವರ್ಧನ್ ಹಾಸನದಲ್ಲಿ ನೆಲೆಸಿದ್ದರೆ, ನಟಿ ತನ್ನ ಒಂದು ವರ್ಷದ ಮಗಳ ಜೊತೆ ಮಾಗಡಿ ರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿದ್ದಾಳೆ. ಅಂದಹಾಗೆ, ಚೈತ್ರಾ ಮತ್ತು ಹರ್ಷವರ್ಧನ್ ಇಬ್ಬರು 2023ರಲ್ಲಿ ಮದುವೆಯಾದರು.
ಗಂಡನಿಂದ ದೂರಾದ ಬಳಿಕ ಚೈತ್ರಾ ಅವರು ಕಿರುತೆರೆ ನಟಿಯಾಗಿ ತಮ್ಮ ವೃತ್ತಿ ಜೀವನ ಮುಂದುವರಿಸಿದರು. ಡಿಸೆಂಬರ್ 7ರಂದು ತಾನು ಶೂಟಿಂಗ್ ನಿಮಿತ್ತ ಮೈಸೂರಿಗೆ ಹೋಗುವುದಾಗಿ ಚೈತ್ರಾ ತಮ್ಮ ಕುಟುಂಬಕ್ಕೆ ತಿಳಿಸಿದ್ದರು. ಆದರೆ, ಇದೆಲ್ಲ ಗಂಡನ ಮಹಾ ಸಂಚು ಎಂಬುದು ಆಕೆಗೆ ಗೊತ್ತಿರಲಿಲ್ಲ. ಹರ್ಷವರ್ಧನ್ ಸುಮಾರು 20 ಸಾವಿರ ರೂ. ಹಣವನ್ನು ಮುಂಗಡವಾಗಿ ತಮ್ಮ ಸಹವರ್ತಿ ಕೌಶಿಕ್ಗೆ ನೀಡಿದ್ದ. ಬಳಿಕ ಕೌಶಿಕ್, ಮತ್ತೊಬ್ಬ ವ್ಯಕ್ತಿಯ ಸಹಾಯದಿಂದ ಚೈತ್ರಾಗೆ ಕರೆ ಮಾಡಿ ಸುಮಾರು 8 ಗಂಟೆಗೆ ಮೈಸೂರು ರಸ್ತೆ ಮೆಟ್ರೋ ನಿಲ್ದಾಣಕ್ಕೆ ಬರುವಂತೆ ಹೇಳಿದ್ದ. ಆಕೆ ಅಲ್ಲಿಗೆ ಬರುತ್ತಿದ್ದಂತೆ ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ನೈಸ್ ರಸ್ತೆ ಮತ್ತು ಬಿಡದಿ ಮಾರ್ಗವಾಗಿ ಹೋಗಿದ್ದಾರೆ.
ಅದೇ ದಿನ ಬೆಳಗ್ಗೆ 10.30ರ ಸುಮಾರಿಗೆ ಚೈತ್ರಾ ಅವರು ಹೇಗೋ ತನ್ನ ಫ್ರೆಂಡ್ ಗಿರೀಶ್ಗೆ ಕರೆ ಮಾಡಿ ತನ್ನ ಪರಿಸ್ಥಿತಿಯನ್ನು ವಿವರಿಸಿದರು. ತಕ್ಷಣ ಗಿರೀಶ್ ಅವರು ಆಕೆಯ ಕುಟುಂಬಕ್ಕೆ ಕರೆ ಮಾಡಿ ಅಪಹರಣ ಸುದ್ದಿಯನ್ನು ಮುಟ್ಟಿಸಿದರು. ಅದೇ ದಿನ ಸಂಜೆ ಚೈತ್ರಾ ತಾಯಿ ಸಿದ್ದಮ್ಮಗೆ ಕರೆ ಮಾಡಿದ ಹರ್ಷವರ್ಧನ್, ತಾನು ಅಪಹರಣ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ, ತನ್ನ ಮಗಳನ್ನು ತಾನು ಹೇಳಿದ ಜಾಗಕ್ಕೆ ಕರೆದುಕೊಂಡು ಬರುವಂತೆ ಆಗ್ರಹಿಸಿದ್ದಾರೆ. ಕರೆದುಕೊಂಡು ಬರದೇ ಹೋದರೆ ಚೈತ್ರಾಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.
ಚೈತ್ರಾ ತಾಯಿಗೆ ಬೆದರಿಕೆ ಹಾಕಿದ್ದಲ್ಲದೆ ಆಕೆಯ ಮತ್ತೋರ್ವ ಸಂಬಂಧಿಗೆ ಕರೆ ಮಾಡಿ, ಚೈತ್ರಾಳನ್ನು ಸುರಕ್ಷಿತವಾಗಿ ಬಿಡಬೇಕಾದರೆ ಮಗುವನ್ನು ಅರಸಿಕೆರೆಗೆ ಕರೆತರುವಂತೆ ಹೇಳಿದ್ದಾನೆ. ಬಳಿಕ ಚೈತ್ರಾ ಅವರ ಕುಟುಂಬ ಪೊಲೀಸರನ್ನು ಸಂಪರ್ಕಿಸಿ, ದೂರು ದಾಖಲಿಸಿತು. ಚೈತ್ರಾ ಸಹೋದರಿ ನೀಡಿದ ದೂರಿನ ಆಧಾರದ ಮೇಲೆ ಕಿಡ್ನಾಪ್ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭಿಸಿದ್ದಾರೆ.
ಅಂದಹಾಗೆ, ಆರೋಪಿ ಹರ್ಷವರ್ಧನ್, ಎಂಟರ್‌ಪ್ರೈಸಸ್‌ನ ಮಾಲೀಕರು ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದಾರೆ ಎಂದು ತಿಳಿದುಬಂದಿದೆ, (ಏಜೆನ್ಸೀಸ್).