Trisha : ಒಂದು ವರ್ಷದ ಹಿಂದೆ ಕಾಲಿವುಡ್ ಸೂಪರ್ ಸ್ಟಾರ್ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಮತ್ತು ನಾಯಕಿ ತ್ರಿಷಾ ಬಗ್ಗೆ ಕೆಲವು ವದಂತಿಗಳು ಹರಡಿದ್ದವು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಒಂದಾಗುವ ಸಾಧ್ಯತೆಯಿದೆ ಎಂದು ತಮಿಳು ಮಾಧ್ಯಮಗಳಲ್ಲಿಯೂ ವ್ಯಾಪಕವಾಗಿ ವರದಿಯಾಗಿತ್ತು. ಕೆಲವು ದಿನಗಳ ಬಳಿಕ ವದಂತಿಗಳೆಲ್ಲವೂ ತಣ್ಣಗಾಗಿತ್ತು. ಇದೀಗ ಹೊಸ ವದಂತಿಗಳು ಹುಟ್ಟಿಕೊಳ್ಳುತ್ತಿವೆ. ಅದಕ್ಕೆ ಕಾರಣ ನಟಿ ತ್ರಿಷಾ ಪೋಸ್ಟ್ ಮಾಡಿರುವ ಫೋಟೋ.
ಭಾನುವಾರ (ಜೂನ್ 22) ದಳಪತಿ ವಿಜಯ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅನೇಕ ಸೆಲೆಬ್ರಿಟಿಗಳು ಅವರಿಗೆ ಶುಭ ಹಾರೈಸಿದರು. ಕೀರ್ತಿ ಸುರೇಶ್ ಕೂಡ ಇನ್ಸ್ಟಾಗ್ರಾಂನಲ್ಲಿ ವಿಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಸ್ಟೋರಿಯನ್ನು ಪೋಸ್ಟ್ ಮಾಡಿದರು. ಆದರೆ, ತ್ರಿಶಾ 'ಹ್ಯಾಪಿ ಬರ್ತ್ಡೇ ಟು ದಿ ಬೆಸ್ಟ್' ಎಂದು ಶೀರ್ಷಿಕೆ ನೀಡಿ ವಿಜಯ್ ತಮ್ಮ ಪಕ್ಕದಲ್ಲಿ ಕುಳಿತು ತನ್ನ ಸಾಕು ನಾಯಿಯೊಂದಿಗೆ ಆಟವಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದು ಮತ್ತೊಮ್ಮೆ ಅಭಿಮಾನಿಗಳಲ್ಲಿ ಅನುಮಾನಗಳನ್ನು ಹುಟ್ಟುಹಾಕಿದೆ.
ಫೋಟೋ ನೋಡಿದರೆ ವಿಜಯ್ ಅವರು ತ್ರಿಷಾ ಮನೆಯಲ್ಲಿ ಇರುವಂತೆ ಕಾಣುತ್ತೆ. ಆದರೆ ಇದು ಈಗಿನ ಫೋಟೋನಾ? ಅಥವಾ ಹಳೆಯ ಫೋಟೋನಾ? ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಅಭಿಮಾನಿಗಳು ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಪ್ರಸ್ತುತ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಹಿಂದೆ, ಕೀರ್ತಿ ಸುರೇಶ್ ಅವರ ಮದುವೆಗೆ ವಿಜಯ್ ಮತ್ತು ತ್ರಿಷಾ ಪ್ರೈವೆಟ್ ಜೆಟ್ನಲ್ಲಿ ತೆರಳಿದ್ದರು. ಈ ವೇಳೆಯೂ ಭಾರಿ ಸುದ್ದಿಯಾಗಿತ್ತು. ಆದರೆ, ತ್ರಿಷಾ ಆಗಲಿ ಅಥವಾ ವಿಜಯ್ ಆಗಲಿ ಯಾವುದೇ ವದಂತಿಗಳ ಬಗ್ಗೆ ಒಮ್ಮೆಯೂ ಮಾತನಾಡಿಲ್ಲ.
ಇನ್ನು ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ವಿಜಯ್ 'ಜನ ನಾಯಗನ್' ಸಿನಿಮಾ ಮಾಡುತ್ತಿದ್ದಾರೆ. ಇದು ಅವರ ಕೊನೆಯ ಸಿನಿಮಾ. ಏಕೆಂದರೆ, ವಿಜಯ್ ಅವರು ರಾಜಕೀಯ ಪ್ರವೇಶಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಪಕ್ಷ ಸ್ಪರ್ಧಿಸಲಿದೆ.
ತ್ರಿಷಾ ಬಗ್ಗೆ ಹೇಳುವುದಾದರೆ, 40 ವರ್ಷ ದಾಟಿದರೂ ತ್ರಿಷಾ ಅವರಿನ್ನೂ ಮದುವೆಯಾಗಿಲ್ಲ. ಈ ಹಿಂದೆ ಒಮ್ಮೆ ಉದ್ಯಮಿಯೊಬ್ಬರನ್ನು ಮದುವೆಯಾಗಲು ಹೋಗಿದ್ದರು ಆದರೆ, ಕಾರಣಾಂತರಗಳಿಂದ ಅದು ರದ್ದಾಗಿತ್ತು. ಚಿತ್ರರಂಗದಿಂದ ತ್ರಿಷಾ ದೂರ ಸರಿದರು ಅನ್ನೋ ಮಾತುಗಳು ಕೇಳು ಬರುವಾಗಲೇ '96' ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದರು. ನಂತರ, ಅವರು 'ಪೊನ್ನಿಯಿನ್ ಸೆಲ್ವನ್' ಎರಡು ಭಾಗಗಳಲ್ಲಿ ಮತ್ತು ಲಿಯೋ, ವಿದಾಮುಯರ್ಚಿ ಹಾಗೂ ಗುಡ್ ಬ್ಯಾಡ್ ಅಗ್ಲಿಯಂತಹ ಕ್ರೇಜಿ ಸಿನಿಮಾಗಳನ್ನು ಮಾಡಿದರು. ಪ್ರಸ್ತುತ, ಅವರು ಚಿರಂಜೀವಿ ಅವರ 'ವಿಶ್ವಂಭರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್)