ಬೆಂಗಳೂರು: ಡ್ರಗ್ಸ್ ಪ್ರಕರಣದ ತನಿಖೆ ಸರಿಯಾದ ದಾರಿಯಲ್ಲಿ ಸಾಗಬೇಕಾದರೆ ಅದನ್ನು ಸಿಬಿಐಗೆ ವಹಿಸಬೇಕು ...
ಹಾಗಂತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಈ ಹಿಂದೆ ಡ್ರಗ್ಸ್ ಮಾಫಿಯಾಗೂ ಕನ್ನಡ ಚಿತ್ರರಂಗಕ್ಕೂ ನಂಟಿದೆ ಎಂದು ಹೇಳಿದ್ದರು. ಆ ನಂತರ ಈ ಪ್ರಕರಣಕ್ಕೊಂದು ಹೊಸ ತಿರುವು ಸಿಕ್ಕಿತ್ತು. ಈ ಮಧ್ಯೆ ಅವರು ಹೊಸದೊಂದು ಬಾಂಬ್ ಸಿಡಿಸಿದ್ದಾರೆ.
ಇಂದು (ಸೆಪ್ಟೆಂಬರ್ 21) ಇಂದ್ರಜಿತ್ ಲಂಕೇಶ್ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನು ಹಿರಿಯ ಕಲಾವಿದರನ್ನು ಸನ್ಮಾನಿಸುವ ಮೂಲಕ ಇಂದ್ರಜಿತ್ ಆಚರಿಸಿಕೊಂಡರು. ಹಿರಿಯ ನಟರಾದ ಎಂ.ಎಸ್. ಉಮೇಶ್, ಬೆಂಗಳೂರು ನಾಗೇಶ್, ಶೈಲಶ್ರೀ, ಆರ್.ಟಿ. ರಮಾ ಮುಂತಾದವರನ್ನು ಅವರು ಗೌರವಿಸಿದರು.
ನಂತರ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, 'ಡ್ರಗ್ಸ್ ಪ್ರಕರಣದ ತನಿಖೆ ಸರಿಯಾದ ದಾರಿಯಲ್ಲಿ ಸಾಗಬೇಕಾದರೆ ಅದನ್ನು ಸಿಬಿಐಗೆ ವಹಿಸಬೇಕು. ಆಗ ಹತ್ತಾರು ಪ್ರಶ್ನೆಗಳಿಗೆ ಉತ್ತರ ಸಿಗಲಿವೆ. ಈ ವಿಷಯವಾಗಿ ತನಿಖೆಯಾದರೆ ಶವಗಳು ಕೂಡಾ ಎದ್ದು ಕೂರಲಿವೆ' ಎಂದು ಹೇಳಿದರು.
ಡ್ರಗ್ಸ್ ಪ್ರಕರಣದ ತನಿಖೆ ತ್ವರಿತವಾಗಿ ಆಗುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, 'ಇಷ್ಟು ದಿನಗಳ ಕಾಲ ಆಗಿರುವುದು ಬಹಳ ಕಡಿಮೆಯೇ. ಇದನ್ನೆಲ್ಲಾ ಸೂಕ್ಷ್ಮವಾಗಿ ನೋಡಿದರೆ, ಪೊಲೀಸರ ಕೈಗಳನ್ನು ಕಟ್ಟಿ ಹಾಕಿದಂತಾಗಿದೆ. ಈ ದಂಧೆಯಲ್ಲಿ ನಟರು, ರಾಜಕಾರಣಿಗಳು, ಇವೆಂಟ್ ಮ್ಯಾನೇಜರ್‌ಗಳು ಸೇರಿದಂತೆ ಹಲವರು ಇದ್ದಾರೆ' ಎಂದರು.
'ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ಕನ್ನಡದ ಹಿರಿಯ ನಿರ್ದೇಶಕರ ಮಗನನ್ನು ಪೊಲೀಸರು ಇನ್ನೂ ಕರೆಸಿಲ್ಲ. ಈ ಪ್ರಕರಣ ಕುರಿತಂತೆ ಆಡಳಿತ ಪಕ್ಷವಾಗಲೀ, ಪ್ರತಿಪಕ್ಷವಾಗಲೀ ಸರಿಯಾ ಆಸಕ್ತಿ ತೋರಿಸುತ್ತಿಲ್ಲ. ಹಾಗಾಗಿ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು' ಎಂದು ಇಂದ್ರಜಿತ್ ಹೇಳಿದರು.