ವಾರಣಾಸಿ ಸಿನಿಮಾದ ಪೋಸ್ಟರ್ ಮತ್ತು ನಿರ್ದೇಶಕ ರಾಜಮೌಳಿ
- ಜಕ್ಕಣ್ಣ ಎಂದೇ ಖ್ಯಾತರಾಗಿರುವ ಭಾರತೀಯ ಸಿನಿಮಾ ರಂಗದ ಸ್ಟಾರ್ ನಿರ್ದೇಶಕ ರಾಜಮೌಳಿ
- ಬಾಹುಬಲಿ ಮತ್ತು ಆರ್‌ಆರ್‌ಆರ್ ಚಿತ್ರಗಳ ಮೂಲಕ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಮಿಂಚು
- ಜಕ್ಕಣ್ಣ ಅವರ ಬತ್ತಳಿಕೆಯಿಂದ ತಯಾರಾಗುತ್ತಿದೆ ಬಹುನಿರೀಕ್ಷಿತ ವಾರಣಾಸಿ ಸಿನಿಮಾ
- ರಾಜಮೌಳಿ ಮಾತನ್ನು ಕೇಳಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ ಮಹೇಶ್ ಬಾಬು ಅಭಿಮಾನಿಗಳು
Rajamouli : ಜಕ್ಕಣ್ಣ ಎಂದೇ ಖ್ಯಾತರಾಗಿರುವ ಭಾರತೀಯ ಸಿನಿಮಾ ರಂಗದ ಸ್ಟಾರ್ ನಿರ್ದೇಶಕ ರಾಜಮೌಳಿ ಅವರು ಬಾಹುಬಲಿ ಮತ್ತು ಆರ್‌ಆರ್‌ಆರ್ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾವನ್ನೂ ಮೀರಿ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ, ಜಕ್ಕಣ್ಣ ಅವರ ಬತ್ತಳಿಕೆಯಿಂದ ಬಹುನಿರೀಕ್ಷಿತ ವಾರಣಾಸಿ ಸಿನಿಮಾ ತಯಾರಾಗುತ್ತಿದೆ. ವಾರಣಾಸಿ ಸಿನಿಮಾದಲ್ಲಿ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ನಾಯಕನಾಗಿ ನಟಿಸಿದ್ದು, ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಮಲಯಾಳಂ ನಾಯಕ ಪೃಥ್ವಿ ರಾಜ್ ಸುಕುಮಾರನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ, ಈ ಸಿನಿಮಾದ ಶೂಟಿಂಗ್ ಮಿಂಚಿನ ವೇಗದಲ್ಲಿ ನಡೆಯುತ್ತಿದೆ. ಮುಂದಿನ ವರ್ಷ ಅಂದರೆ, 2027, ಏಪ್ರಿಲ್ 7ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.
ಅಂದಹಾಗೆ, ಬಾಹುಬಲಿ ಸಿನಿಮಾ ಎರಡು ಭಾಗಗಳಾಗಿ ಬಿಡುಗಡೆಯಾಗಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ. ಇದಾದ ನಂತರ ಭಾರತೀಯ ಸಿನಿಮಾ ರಂಗದ ಅನೇಕ ಸಿನಿಮಾಗಳು ಕೂಡ ಇದೇ ಹಾದಿಯನ್ನು ಅನುಸರಿಸಿದವು. ಅಗತ್ಯವಿರಲಿ, ಇಲ್ಲದಿರಲಿ ಎರಡು ಭಾಗಗಳನ್ನು ಘೋಷಣೆ ಮಾಡುತ್ತಿವೆ. ಆದರೆ, ಈ ಟ್ರೆಂಡ್ ಮೇಲೆ ಪ್ರೇಕ್ಷಕರು ಇದೀಗ ಆಸಕ್ತಿ ಕಳೆದುಕೊಂಡಿದ್ದಾರೆ. ಎರಡನೇ ಭಾಗ ಬರವರೋಗೂ ಕಾಯುವ ತಾಳ್ಮೆ ಇರುವುದಿಲ್ಲ. ಅಲ್ಲದೆ, ಯಾವುದೇ ಓರ್ವ ನಾಯಕನಿಗೆ ಎರಡು ಭಾಗ ತೆಗೆಯುವಷ್ಟರಲ್ಲಿ ಅನೇಕ ವರ್ಷಗಳೇ ಕಳೆದು ಹೋಗುತ್ತದೆ. ಇದರಿಂದ ಬೇರೆ ಸಿನಿಮಾಗಳನ್ನು ಸಹ ಮಾಡುವುದಕ್ಕೆ ಆಗುವುದಿಲ್ಲ.
ಇದೀಗ, ವಾರಣಾಸಿ ಚಿತ್ರ ಕೂಡ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿವೆ ಎಂಬ ವದಂತಿಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಅಭಿಮಾನಿಗಳು ಮತ್ತು ಪ್ರೇಕ್ಷಕರು ಎರಡನೇ ಭಾಗಕ್ಕಾಗಿ ಇನ್ನೂ ಎಷ್ಟು ವರ್ಷ ಕಾಯಬೇಕಾಗುತ್ತದೆ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಪ್ರಭಾಸ್ ಅವರು ಬಾಹುಬಲಿಗಾಗಿ ನಾಲ್ಕೈದು ವರ್ಷ ಯಾವುದೇ ಸಿನಿಮಾವನ್ನು ಮಾಡಲಿಲ್ಲ. ಅದೇ ರೀತಿ ಮಹೇಶ್ ಬಾಬುವಿಗೆ ಆಗುತ್ತದೆ ಅನ್ನೋದು ಅಭಿಮಾನಿಗಳ ಆತಂಕ. ಆದರೆ, ಇದೀಗ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಅದೇನೆಂದರೆ, ರಾಜಮೌಳಿ ಅವರು ಇತ್ತೀಚೆಗೆ ಹಾಲಿವುಡ್‌ನ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಎರಡು ಭಾಗಗಳ ಬಗ್ಗೆ ಎದ್ದಿರುವ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.
ಈ ಸಂದರ್ಶನದಲ್ಲಿ ರಾಜಮೌಳಿ ಹೇಳಿದ್ದೇನೆಂದರೆ, ಆರಂಭದಲ್ಲಿ ವಾರಣಾಸಿ ಚಿತ್ರಕ್ಕೆ ಎರಡು ಭಾಗಗಳ ಬಗ್ಗೆ ಯೋಚಿಸಿದ್ದೆವು. ಆದರೆ, ನಂತರ ಆ ಯೋಚನೆಯನ್ನು ಕೈಬಿಟ್ಟೆವು. ವಾರಣಾಸಿ ಚಿತ್ರದ ಅವಧಿ ಸುಮಾರು ಮೂರು ಗಂಟೆಗಳಿರುತ್ತದೆ ಎಂದು ರಾಜಮೌಳಿ ಹೇಳಿದ್ದಾರೆ. ಇದರೊಂದಿಗೆ, ವಾರಣಾಸಿಗೆ ಭಾಗ 2 ಇರುವುದಿಲ್ಲ ಎಂಬುದನ್ನು ರಾಜಮೌಳಿ ಸ್ಪಷ್ಟಪಡಿಸಿದ್ದಾರೆ.
ರಾಜಮೌಳಿ ಅವರ ಈ ಮಾತನ್ನು ಕೇಳಿದ ಮಹೇಶ್ ಬಾಬು ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಏಕೆಂದರೆ, ತಮ್ಮ ನೆಚ್ಚಿನ ನಟ ನಾಲ್ಕೈದು ವರ್ಷ ಒಂದೇ ಸಿನಿಮಾದಲ್ಲಿ ಸಿಲುಕಿಕೊಳ್ಳುವುದು ಅಭಿಮಾನಿಗಳಿಗೆ ಇಷ್ಟವಿಲ್ಲ. ವಾರಣಾಸಿ ಸಿನಿಮಾದ ಶೂಟಿಂಗ್ ಮುಗಿಯುತ್ತಿದ್ದಂತೆ ಬೇರೆ ಸಿನಿಮಾಗಳಲ್ಲಿ ಬಿಜಿಯಾಗಲಿ ಮತ್ತು ಇನ್ನಷ್ಟು ಸಿನಿಮಾಗಳನ್ನು ನಮಗೆ ನೀಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ, (ಏಜೆನ್ಸೀಸ್).