ನಟಿ ಸಮಂತಾ ರುತು ಪ್ರಭು ಹಾಗೂ ನಿರ್ದೇಶಕ ರಾಜ್ ನಿಧಿಮೋರು
- ಸಮಂತಾ ಮದುವೆ ಯಾವಾಗ ಎಂಬ ವರ್ಷಗಳ ಪ್ರಶ್ನೆಗೆ ಕೊನೆಗೂ ಸಿಕ್ಕಿತು ಉತ್ತರ
- ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ಯಾಮ್
- ಕೊಯಮತ್ತೂರಿನ ಇಶಾ ಫೌಂಡೇಶನ್‌ನ ಲಿಂಗ ಭೈರವಿ ದೇವಾಲಯದಲ್ಲಿ ನಡೆದ ವಿವಾಹ
- ಸಮಂತಾ ಮದುವೆ ಬೆನ್ನಲ್ಲೇ ಅವರು ಧರಿಸಿದ್ದ ಉಂಗುರದ ಮೇಲಿನ ಚರ್ಚೆ ಜೋರು
ಹೈದರಾಬಾದ್: ಮುದ್ದಾದ ತಾರಾ ಜೋಡಿ ಎಂದೇ ಪ್ರಸಿದ್ಧರಾಗಿದ್ದ ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ರುತು ಪ್ರಭು ( Samantha Ruth Prabhu ) ಡಿವೋರ್ಸ್ ಆದಂತಹ ಸಂದರ್ಭದಲ್ಲಿ ಕೇವಲ ಟಾಲಿವುಡ್ ಮಾತ್ರವಲ್ಲದೇ, ದೇಶಾದ್ಯಂತ ಭಾರಿ ಚರ್ಚೆಯಾಗಿತ್ತು. ಬಳಿಕ ನಾಗಚೈತನ್ಯ ಅವರು ಮತ್ತೊಂದು ಮದುವೆಯಾದಾಗ ಎಲ್ಲರೂ ಸಮಂತಾ ಮದುವೆ ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದರು. ಆದರೆ, ಸಮಂತಾ ಮಾತ್ರ ಸಿನಿಮಾಗಳಲ್ಲಿ ಬಿಜಿಯಾಗಿದ್ದರು. ಇದರ ನಡುವೆ ಅವರ ಹೆಸರು ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ವರ್ಷಗಳಿಂದಲೇ ಕೇಳಿಬರುತ್ತಿತ್ತು. ಇಬ್ಬರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ಇಬ್ಬರ ನಡುವೆ ಪ್ರೀತಿ ಚಿಗುರಿದೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಆದರೆ, ಸಮಂತಾ ಆಗಲಿ ಅಥವಾ ರಾಜ್ ಆಗಲಿ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ದಿಢೀರನೇ ಮದುವೆ ಆಗುವ ಮೂಲಕ ಸಮಂತಾ ಮತ್ತು ರಾಜ್ ಎಲ್ಲರನ್ನು ಅಚ್ಚರಿಗೆ ದೂಡಿದ್ದಾರೆ.
ಹೌದು, ರಾಜ್ ಮತ್ತು ಸಮಂತಾ ನಿನ್ನೆ (ಡಿ.01) ಕೊಯಮತ್ತೂರಿನ ಇಶಾ ಫೌಂಡೇಶನ್‌ನ ಲಿಂಗ ಭೈರವಿ ದೇವಾಲಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಮಾರಂಭದಲ್ಲಿ ಕೆಲವೇ ಕೆಲ ನಿಕಟ ಸಂಬಂಧಿಗಳು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ವಿವಾದ ಫೋಟೋಗಳನ್ನು ಸಮಂತಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿವೆ.
ಯಾವಾಗ ಫೋಟೋಗಳು ವೈರಲ್ ಆಯಿತೋ ಅಭಿಮಾನಿಗಳ ಕಣ್ಣು ಸಮಂತಾರ ಉಂಗುರದ ಮೇಲೆ ಬಿದ್ದಿದೆ. ಇದರಿಂದ ಉಂಗುರದ ರಹಸ್ಯವೊಂದನ್ನು ಅಭಿಮಾನಿಗಳು ಭೇದಿಸಿದ್ದಾರೆ. ಅದೇನೆಂದರೆ, ಸಮಂತಾ ಅವರು ಈ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಏಕೆಂದರೆ, ಕಳೆದ ಫೆಬ್ರವರಿಯಲ್ಲಿ ಸಮಂತಾ ಅವರು ಒಂದು ಫೋಟೋ ಹಂಚಿಕೊಂಡಿದ್ದರು. ಆ ಫೋಟೋದಲ್ಲಿದ್ದ ಉಂಗುರವನ್ನೇ ಇದೀಗ ರಾಜ್ ಅವರು ಸಮಂತಾಗೆ ತೊಡಿಸಿದ್ದಾರೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಆದ್ದರಿಂದ ಉಂಗುರದ ಮೇಲಿನ ಚರ್ಚೆ ಜೋರಾಗಿದೆ. ಇದರ ನಡುವೆ ಉಂಗುರದ ಬೆಲೆಯು ಕೂಡ ಚರ್ಚೆಯಾಗುತ್ತಿದೆ.
ಅಂದಹಾಗೆ, ಈ ಉಂಗುರವನ್ನು ಮಧ್ಯದಲ್ಲಿರುವ ಒಂದು ವಜ್ರದ ಹರಳು ಮತ್ತು ಅದನ್ನು ಸುತ್ತುವರೆದಿರುವ ವಜ್ರದ ಎಂಟು ತುಂಡುಗಳಿಂದ ಡಿಸೈನ್ ಮಾಡಲಾಗಿದೆ. ಈ ಉಂಗುರದ ಬೆಲೆ ಸುಮಾರು 1.5 ಕೋಟಿ ರೂ.ಗಳೆಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಸಮಂತಾ ಅವರು ತಮ್ಮ ಮದುವೆಗೆ ಸುಂದರವಾದ ಕೆಂಪು ರೇಷ್ಮೆ ಸೀರೆಯನ್ನು ಧರಿಸಿದ್ದರು. ಇದು ಸ್ಯಾಟಿನ್ ರೇಷ್ಮೆಯಿಂದ ನೇಯ್ದ ಸಾಂಪ್ರದಾಯಿಕ ಬನಾರಸಿ ರೇಷ್ಮೆ ಸೀರೆಯಾಗಿದೆ. ಇದನ್ನು ಡಿಸೈನರ್ ಅರ್ಪಿತಾ ಮೆಹ್ತಾ ಅವರು ಡಿಸೈನ್ ಮಾಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಸಮಂತಾ ಮತ್ತು ರಾಜ್ ನಿಧಿಮೋರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ರಾಜ್ ಸಹ-ನಿರ್ದೇಶನ ಮತ್ತು ಸಹ-ನಿರ್ಮಾಣ ಮಾಡಿದ ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿಯಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಕಳೆದ ವರ್ಷ, ಅವರಿಬ್ಬರೂ ಅಮೆರಿಕದಲ್ಲಿ ಒಟ್ಟಿಗೆ ರಜೆ ಕಳೆಯುತ್ತಿರುವ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಇದರ ನಡುವೆ ರಾಜ್ ಅವರು ಇತ್ತೀಚೆಗೆ ಸಮಂತಾ ಅವರ ಸುಗಂಧ ದ್ರವ್ಯ ಬ್ರಾಂಡ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ರಾಜ್, ಸಮಂತಾ ಅವರನ್ನು ತಬ್ಬಿಕೊಂಡಿರುವ ಫೋಟೋ ಮತ್ತು ಸಮಂತಾ ಅದಕ್ಕೆ ಬರೆದಿದ್ದ ಟಿಪ್ಪಣಿ ಬಹಳ ಚರ್ಚೆಯಾಗಿತ್ತು. ನಾನು ಈವರೆಗೆ ಭೇಟಿಯಾದವರಲ್ಲಿ ಕೆಲವು ಬುದ್ಧಿವಂತ, ಕಠಿಣ ಪರಿಶ್ರಮಿ ಮತ್ತು ಅತ್ಯಂತ ಪ್ರಾಮಾಣಿಕ ಜನರೊಂದಿಗೆ ಕೆಲಸ ಮಾಡಿದ್ದಕ್ಕಾಗಿ ನಾನು ತುಂಬಾ ಕೃತಜ್ಞಳಾಗಿದ್ದೇನೆ ಎಂದು ಹೇಳಿದ್ದರು. ಅಲ್ಲದೆ, ನಥಿಂಗ್ ಟು ಹೈಡ್" (ಮುಚ್ಚಿಡಲು ಏನು ಇಲ್ಲ) ಎಂಬ ಹ್ಯಾಶ್‌ಟ್ಯಾಗ್ ಕೂಡ ಚರ್ಚೆಗೆ ಗ್ರಾಸವಾಗಿತ್ತು.
ಅಂದಹಾಗೆ, ಸಮಂತಾ ಮತ್ತು ನಟ ನಾಗಚೈತನ್ಯ 2021 ರಲ್ಲಿ ಬೇರ್ಪಟ್ಟರು. ಕಳೆದ ವರ್ಷ, ನಾಗಚೈತನ್ಯ ಅವರು ನಟಿ ಶೋಭಿತಾ ಧೂಳಿಪಾಲ ಅವರನ್ನು ವಿವಾಹವಾದರು. ಇದೀಗ ಸಮಂತಾ ಕೂಡ ಮದುವೆಯಾಗಿದ್ದಾರೆ. ಇನ್ನೊಂದೆಡೆ ರಾಜ್ ನಿಧಿಮೋರು ಅವರಿಗೆ ಇದು ಎರಡನೇ ಮದುವೆಯೂ ಹೌದು, (ಏಜೆನ್ಸೀಸ್).