ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ಸ್ಟಾರ್​ ನಿರ್ದೇಶಕ ರಾಜಮೌಳಿ  
ಟಾಲಿವುಡ್

ಐದು ಯುಗ, ಐದು ಅವತಾರ... ವಾರಣಾಸಿಗಾಗಿ ರಾಜಮೌಳಿ ಮೆಗಾ ಪ್ಲಾನಿಂಗ್​, ಸಿನಿಗಲ್ಲಿಯಲ್ಲಿ ಇದೊಂದೇ ಚರ್ಚೆ! Varanasi

ಪ್ರಮುಖ ಮುಖ್ಯಾಂಶಗಳು

  • ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ಸ್ಟಾರ್​ ನಿರ್ದೇಶಕ ರಾಜಮೌಳಿ ಕಾಂಬೋದಲ್ಲಿ ಮೆಗಾ ಸಿನಿಮಾ
  • ವಾರಣಾಸಿ ಚಿತ್ರದ ಕತೆಯಲ್ಲಿ ಎಲ್ಲೂ ರಾಜಿ ಮಾಡಿಕೊಂಡಿಲ್ಲವಂತೆ ಜಕ್ಕಣ್ಣ
  • 5 ಅವತಾರಗಳಲ್ಲಿ ಮಹೇಶ್​ ಬಾಬು ಅವರು ಬೆಳ್ಳಿ ಪರದೆಯಲ್ಲಿ ವಿಜೃಂಭಿಸಲಿದ್ದಾರಂತೆ
ಹೈದರಾಬಾದ್​: ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ಸ್ಟಾರ್​ ನಿರ್ದೇಶಕ ರಾಜಮೌಳಿ ಕಾಂಬೋದಲ್ಲಿ ಒಂದು ಮೆಗಾ ಸಿನಿಮಾ ಬರುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರದ ಸಂಗತಿಯೇನಲ್ಲ. ಇತ್ತೀಚೆಗೆ ನಡೆದ ದೊಡ್ಡ ಕಾರ್ಯಕ್ರಮದಲ್ಲಿ ಸಿನಿಮಾ ಹೆಸರನ್ನು ಅದ್ಧೂರಿಯಾಗಿ ಘೋಷಿಸಲಾಯಿತು. ಚಿತ್ರಕ್ಕೆ 'ವಾರಣಾಸಿ' ( Varanasi ) ಎಂಬ ಶೀರ್ಷಿಕೆ ಇಡಲಾಗಿದೆ.
ಶೀರ್ಷಿಕೆ ಅನಾವರಣ ಸಂದರ್ಭದಲ್ಲೇ ಬಿಡುಗಡೆಯಾದ ಟೀಸರ್​ನಲ್ಲಿನ ದೃಶ್ಯ ವೈಭವವನ್ನು ಕಂಡು ಸಿನಿ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ. ಈ ಟೀಸರ್ ಭಾರತದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕ್ರೇಜ್​ ಹುಟ್ಟುಹಾಕಿದೆ. ಜಕ್ಕಣ್ಣ ಎಂದೇ ಖ್ಯಾತರಾದ ರಾಜಮೌಳಿ ಅವರು ಈ ಸಿನಿಮಾವನ್ನು ಹಾಲಿವುಡ್ ರೇಂಜ್‌ನಲ್ಲಿ ನಿರ್ಮಿಸುತ್ತಿದ್ದು, ನಿರ್ಮಾಪಕರು ಒಟ್ಟು 1000 ಕೋಟಿ ರೂಪಾಯಿ ಖರ್ಚು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ವಾರಣಾಸಿ ಕತೆಯಲ್ಲಿ ಜಕ್ಕಣ್ಣ ಎಲ್ಲೂ ರಾಜಿ ಮಾಡಿಕೊಂಡಿಲ್ಲವಂತೆ. ಈ ಸಿನಿಮಾಗಾಗಿ ಭಾರತದ ದಂತಕಥೆಗಳು ಮತ್ತು ಟೈಂ ಟ್ರಾವೆಲ್​ನಂತಹ ಬೃಹತ್ ವಿಚಾರಗಳನ್ನೇ ತೆಗೆದುಕೊಳ್ಳುತ್ತಿದ್ದಾರಂತೆ. ಟೀಸರ್‌ನಲ್ಲಿಯೂ ಈ ಅಂಶಗಳನ್ನು ರಾಜಮೌಳಿ ಅವರು ಹೈಲೈಟ್ ಮಾಡಿದ್ದಾರೆ.
ಇತ್ತೀಚೆಗೆ, ಈ ಚಿತ್ರದ ಬಗ್ಗೆ ಒಂದು ಕುತೂಹಲಕಾರಿ ಸುದ್ದಿ, ಸಿನಿಮಾ ವಲಯಗಳಲ್ಲಿ ಚರ್ಚೆಯಾಗುತ್ತಿದೆ. ಅದೇನೆಂದರೆ, ಮಹೇಶ್ ಬಾಬು ಅವರು ಈ ಚಿತ್ರದಲ್ಲಿ ಇದುವರೆಗೆ ನೋಡಿರದ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅದೂ ಸಹ, ಒಂದು ಅಥವಾ ಎರಡಲ್ಲ, 5 ಅವತಾರಗಳಲ್ಲಿ ಮಹೇಶ್​ ಬಾಬು ಅವರು ಬೆಳ್ಳಿ ಪರದೆಯಲ್ಲಿ ವಿಜೃಂಭಿಸಲಿದ್ದಾರಂತೆ.
ಆ 5 ಅವತಾರಗಳಲ್ಲಿ ಎರಡು ಪಾತ್ರಗಳ ಬಗ್ಗೆ ರಾಜಮೌಳಿ ಈಗಾಗಲೇ ಮಾತನಾಡಿದ್ದಾರೆ. ಅವುಗಳಲ್ಲಿ ಒಂದು ರುದ್ರ ಮತ್ತು ಎರಡನೆಯದು ಶ್ರೀರಾಮ. ರಾಜಮೌಳಿ ಈ ಎರಡು ಪಾತ್ರಗಳ ಬಗ್ಗೆ ಮಾತನಾಡಿದ ತಕ್ಷಣ, ಚಿತ್ರದ ಬಗ್ಗೆ ಒಂದು ರೀತಿಯ ಹೈಪ್ ಸೃಷ್ಟಿಯಾಗಿದೆ. ಉಳಿದ ಮೂರು ಪಾತ್ರಗಳು ಸಹ ಅನಿರೀಕ್ಷಿತವಾಗಿರುತ್ತವೆ ಎಂಬ ಮಾತುಗಳು ಕೇಳಿಬರುತ್ತಿವೆ.
ರಾಜಮೌಳಿ ಅವರು ಐದು ಅವತಾರಗಳು ಹಾಗೂ ಐದು ಯುಗಗಳನ್ನು ಒಂದಕ್ಕೊಂದು ಲಿಂಕ್ ಮಾಡುವ ಮೂಲಕ ಕತೆಯನ್ನು ಹೊಂದಿಸಿದ್ದಾರೆ ಎನ್ನಲಾಗುತ್ತಿದೆ. ಭಾರತೀಯ ಸಿನಿಮಾ ಇತಿಹಾಸದಲ್ಲೇ ಇದೊಂದು ವಿಭಿನ್ನ ಸಿನಿಮಾ ಆಗಲಿದೆ ಎನ್ನುತ್ತಿದ್ದಾರೆ. ಹಾಗಾದರೆ, ಮಹೇಶ್​ ಬಾಬು ನಿರ್ವಹಿಸುವ ಆ ಮೂರು ಪಾತ್ರಗಳು ಯಾವುವು ಎಂಬುದನ್ನು ತಿಳಿಯಲು ರಾಜಮೌಳಿ ಹೇಳುವವರೆಗೆ ಕಾಯಬೇಕಿದೆ, (ಏಜೆನ್ಸೀಸ್​).