ಇಡಿ ವಿಚಾರಣೆಗೆ ಹಾಜರಾದ ನಟಿ ನಿಧಿ ಅಗರ್ವಾಲ್ 
ಟಾಲಿವುಡ್

ಅಕ್ರಮ ಬೆಟ್ಟಿಂಗ್​ ಆ್ಯಪ್ ಪ್ರಚಾರ ಪ್ರಕರಣ: ಇಡಿ ವಿಚಾರಣೆಗೆ ಹಾಜರಾದ ನಟಿ ನಿಧಿ ​ಅಗರ್ವಾಲ್; ಸಿನಿರಂಗದಲ್ಲಿ ಭಾರಿ ಸಂಚಲನ! Nidhhi Agerwal

ಪ್ರಮುಖ ಮುಖ್ಯಾಂಶಗಳು

  • ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಚಾರ ಪ್ರಕರಣ
  • ಇಡಿ ವಿಚಾರಣೆಗೆ ಹಾಜರಾದ ನಟಿ ನಿಧಿ ಅಗರ್ವಾಲ್
  • ಮಾಸ್ಕ್​ ಧರಿಸಿ ಹೈದರಾಬಾದ್​ ಕಚೇರಿಗೆ ಹಾಜರಾದ ನಟಿ
ಹೈದರಾಬಾದ್​: ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟಿ ನಿಧಿ ಅಗರ್ವಾಲ್ (Nidhhi Agerwal) ಹೈದರಾಬಾದ್‌ನಲ್ಲಿರುವ ಜಾರಿ ನಿರ್ದೇಶನಾಲಯದ (ED) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಪ್ರಭಾಸ್ ಜೊತೆ 'ದಿ ರಾಜಾ ಸಾಬ್' ಸಿನಿಮಾದಲ್ಲಿ ಮಿಂಚಿದ್ದ ಸುಂದರಿ ನಿಧಿ ಅಗರ್ವಾಲ್, ಬುಧವಾರ (ಆ.19) ಪೊಲೀಸ್ ಭದ್ರತೆಯ ನಡುವೆ ಇಡಿ ಕಚೇರಿಗೆ ಆಗಮಿಸಿದ್ದರು. ಮುಖಕ್ಕೆ ಮಾಸ್ಕ್ ಧರಿಸಿದ್ದ ನಟಿ, ಮಾಧ್ಯಮದವರ ಕ್ಯಾಮೆರಾ ಕಣ್ಣುಗಳಿಗೆ ಸಿಗದೆ, ಯಾರ ಜೊತೆಯೂ ಮಾತನಾಡದೆ ನೇರವಾಗಿ ಕಚೇರಿಯೊಳಗೆ ತೆರಳಿದರು. ಈ ಬೆಳವಣಿಗೆ ಈಗ ಸಿನಿರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಸಿಐಡಿ ಬೆನ್ನಲ್ಲೀಗ ಇಡಿ ಎಂಟ್ರಿ!

ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರದ ವಿಚಾರವಾಗಿ ಹೈದರಾಬಾದ್ ಸಿಐಡಿ ಪೊಲೀಸರು ಈಗಾಗಲೇ ನಿಧಿ ಅವರನ್ನು ಪ್ರಶ್ನಿಸಿದ್ದರು. ಆ ವಿಚಾರಣೆ ನಡೆದು ತಿಂಗಳುಗಳೇ ಕಳೆದಿದ್ದರೂ, ಈಗ ಪ್ರಕರಣದ ಗಂಭೀರತೆ ಅರಿತ ಕೇಂದ್ರ ತನಿಖಾ ಸಂಸ್ಥೆಯಾದ ಇಡಿ ಕೂಡ ಅಖಾಡಕ್ಕಿಳಿದಿದೆ. ಆನ್‌ಲೈನ್ ಖಾತೆಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜೂಜು ವೇದಿಕೆಗಳನ್ನು ಪ್ರಚಾರ ಮಾಡಿದ ಸೆಲೆಬ್ರಿಟಿಗಳ ಜಾಲವನ್ನು ಅಧಿಕಾರಿಗಳು ಬೇಧಿಸುತ್ತಿದ್ದಾರೆ.

ದೂರು ದಾಖಲಾಗಿದ್ದು ಹೇಗೆ?


ಕಳೆದ ವರ್ಷ ಮಾರ್ಚ್ 19ರಂದು ಉದ್ಯಮಿ ಪಿಎಂ ಫಣೀಂದ್ರ ಶರ್ಮಾ ಅವರು ಹೈದರಾಬಾದ್‌ನ ಮಿಯಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸೆಲೆಬ್ರಿಟಿಗಳ ಪ್ರಚಾರ ನೋಡಿ ಯುವಕರು ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಿಗೆ ಹಣ ಹಾಕಿ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ದೂರಿದ್ದರು.
ದೂರಿನಲ್ಲಿ ಖ್ಯಾತನಾಮರದ್ದೇ ಖರಾಮತ್ತು: 1867ರ ಸಾರ್ವಜನಿಕ ಜೂಜಾಟ ಕಾಯ್ದೆಯ ಉಲ್ಲಂಘನೆ ಅಡಿಯಲ್ಲಿ ತೆಲಂಗಾಣ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಪಟ್ಟಿಯಲ್ಲಿ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ ಮತ್ತು ಮಂಚು ಲಕ್ಷ್ಮಿ ಸೇರಿದಂತೆ ಬರೋಬ್ಬರಿ 21 ಸೆಲೆಬ್ರಿಟಿಗಳ ಹೆಸರುಗಳಿದ್ದು, ತನಿಖೆ ಮುಂದುವರಿದಿದೆ.

ಸುಪ್ರೀಂ ಕೋರ್ಟ್ ಅಂಗಳದಲ್ಲೂ ಬೆಟ್ಟಿಂಗ್ ಕಹಳೆ

ಭಾರತದಲ್ಲಿ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಿನ ಹಾವಳಿ ಮಿತಿಮೀರಿದ್ದು, ಇದರ ವಿರುದ್ಧ ಕಟ್ಟುನಿಟ್ಟಿನ ನಿಯಂತ್ರಣ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಅಂತಿಮ ವಿಚಾರಣೆಗೆ ಕೈಗೆತ್ತಿಕೊಂಡಿದೆ.

ಇಂತಹ ಕಠಿಣ ಕಾನೂನು ಹೋರಾಟದ ನಡುವೆಯೇ ನಿಧಿ ಅಗರ್ವಾಲ್ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿರುವುದು ಕುತೂಹಲ ಮೂಡಿಸಿದೆ. ಸದ್ಯ ಇಡಿ ಅಧಿಕಾರಿಗಳ ಮುಂದಿನ ವಿಚಾರಣೆಯಲ್ಲಿ ಏನೆಲ್ಲಾ ಹೊರಬೀಳಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ, (ಏಜನ್ಸೀಸ್​).