- ಸಂದೀಪ್ ರೆಡ್ಡಿ ವಂಗಾ, ಪ್ರಭಾಸ್ ಕಾಂಬೊ ಚಿತ್ರ 'ಸ್ಪಿರಿಟ್'
- ಒಂದೇ ಒಂದು ಪೋಸ್ಟರ್ಗೂ ಮುನ್ನವೇ ಸಖತ್ ಡಿಮಾಂಡ್
- ದುಬಾರಿ ಮೊತ್ತಕ್ಕೆ ಚಿತ್ರದ ಡಿಜಿಟಲ್ ಹಕ್ಕುಗಳು ಸೇಲ್
ಅಂಧ್ರಪ್ರದೇಶ: ಪ್ರಸ್ತುತ, ಟಾಲಿವುಡ್ ಅಂಗಳದಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಿನಿಮಾಗಳು ತೆರೆಗೆ ಬರಲು ಸಾಲುಗಟ್ಟಿ ನಿಂತಿವೆ. ಇವುಗಳ ಪೈಕಿ ಹೊಸಬರ ಚಿತ್ರಗಳು ಒಂದಷ್ಟು ಆದರೆ, ಸ್ಟಾರ್ ಹೀರೋ ಮತ್ತು ನಿರ್ದೇಶಕರ ಕಾಂಬೊ ಸಿನಿಮಾಗಳು ಇನ್ನೊಂದಷ್ಟು. ಈಗಾಗಲೇ ಹಲವು ಬಹುನಿರೀಕ್ಷಿತ ಫಿಲಂಗಳ ಪಟ್ಟಿಗೆ ಸೇರಿದ್ದು, ಸಿನಿಪ್ರಿಯರ ಕುತೂಹಲವನ್ನು ದಿನದಿಂದ ದಿನಕ್ಕೆ ಇನ್ನಷ್ಟು ಕೆರಳಿಸುತ್ತಿವೆ.
ತೆಲುಗು ಚಿತ್ರರಂಗದ ಅಂಗಳದಿಂದ ಮೂಡಿಬರುತ್ತಿರುವ ಅನೇಕ ಸಿನಿಮಾಗಳ ಪೈಕಿ ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ಸುದ್ದಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಚಿತ್ರ ಎಂದರೆ ಅದು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಹಾಗೂ ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ 'ಸ್ಪಿರಿಟ್'. ಈ ಬಿಗ್ ಬಜೆಟ್ ಚಿತ್ರದ ಕೆಲಸಗಳು ಆರಂಭವಾದಗಿನಿಂದಲೂ ಸಾಕಷ್ಟು ವಿವಾದ ಮತ್ತು ಹೊಸ ವಿಷಯಗಳಿಂದ ಮುನ್ನೆಲೆಗೆ ಬಂದಿವೆ. ಅಸಲಿಗೆ, ಇದು ಚಿತ್ರದ ಬಗ್ಗೆ ಜನರಿಗೆ ಪರೋಕ್ಷವಾಗಿ ಆಗಾಗ್ಗೆ ಮಾಹಿತಿ ನೀಡುತ್ತಿದೆ.
ದೀಪಿಕಾ ಔಟ್, ತ್ರಿಪ್ತಿ ಇನ್
ಮೊದಲಿಗೆ ದೀಪಿಕಾ ಪಡುಕೋಣೆ ಅವರೇ 'ಸ್ಪಿರಿಟ್' ಚಿತ್ರದ ನಾಯಕಿ ಎಂದು ಅಧಿಕೃತವಾಗಿ ಘೋಷಿಸಲಾಗಿತ್ತು. ಆದ್ರೆ, ನಂತರದಲ್ಲಿ ನಿರ್ದೇಶಕರು ಮತ್ತು ನಟಿಯ ನಡುವೆ ಉಂಟಾದ ಒಂದಷ್ಟು ಮನಸ್ತಾಪಗಳು ದೀಪಿಕಾರನ್ನು ಚಿತ್ರತಂಡದಿಂದ ಬಲವಂತವಾಗಿ ಕೈಬಿಡುವಂತೆ ಮಾಡಿತು. ಈ ವಿವಾದದ ಬೆನ್ನಲ್ಲೇ ದೀಪಿಕಾ ಸ್ಥಾನಕ್ಕೆ ಬಾಲಿವುಡ್ ಯುವನಟಿ ತ್ರಿಪ್ತಿ ದಿಮ್ರಿ ಅವರನ್ನು ಕರೆತರಲಾಯಿತು. ಇದೆಲ್ಲದರ ನಡುವೆ ಇದೀಗ ಸಂದೀಪ್ ವಂಗಾ ಬಾಲಿವುಡ್ನ ದೊಡ್ಡ ನಿರ್ಮಾಣ ಕಂಪನಿಯಾದ ಟಿ-ಸೀರೀಸ್ ಜತೆಗೆ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
160 ಕೋಟಿ ರೂ.
ಬಹುತೇಕರಿಗೆ ತಿಳಿದಿರುವಂತೆ ಚಿತ್ರದ ಪೋಸ್ಟರ್, ಟೀಸರ್, ಟ್ರೇಲರ್ ಅದನ್ನೂ ಮೀರಿ ಸಿನಿಮಾದ ರಿಲೀಸ್ ಆಧರಿಸಿ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಆಯಾ ಒಟಿಟಿ ಅಥವಾ ಸಂಸ್ಥೆಗಳು ಖರೀದಿಸಲು ಮುಂದಾಗುತ್ತವೆ. ಆದರೆ, ಸಂದೀಪ್-ರೆಬೆಲ್ ಸ್ಟಾರ್ ಕಾಂಬೊದಲ್ಲಿ ತಯಾರಾಗುತ್ತಿರುವ ಸ್ಪಿರಿಟ್ ಇನ್ನೂ ಆರಂಭಿಕ ಹಂತದಲ್ಲಿದ್ದರೂ, ಚಿತ್ರದ ಡಿಜಿಟಲ್ ಹಕ್ಕುಗಳು ದುಬಾರಿ ಮೊತ್ತಕ್ಕೆ ಮಾರಾಟವಾಗಿವೆ ಎಂಬ ವರದಿಗಳು ಸದ್ಯ ಟಾಲಿವುಡ್ ಅಂಗಳದಲ್ಲಿ ಜೋರಾಗಿ ಸದ್ದು ಮಾಡುತ್ತಿವೆ. ಮಾಹಿತಿಯ ಪ್ರಕಾರ, ಜನಪ್ರಿಯ ಒಟಿಟಿ ಕಂಪನಿಯೊಂದು ಸ್ಪಿರಿಟ್ ಡಿಜಿಟಲ್ ಹಕ್ಕುಗಳನ್ನು ಬರೋಬ್ಬರಿ 160 ಕೋಟಿ ರೂ.ಗೆ ಖರೀದಿಸಿದೆ ಎನ್ನಲಾಗಿದೆ.
2026ರಲ್ಲಿ ತೆರೆಗೆ?
ಸಂದೀಪ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಮತ್ತು ತ್ರಿಪ್ತಿ ದಿಮ್ರಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ, ವಿವೇಕ್ ಓಬಿರಾಯ್, ಕಾಂಚಾನ, ಪ್ರಕಾಶ್ ರಾಜ್ ಸೇರಿ ಹಲವರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆ ಕಾಣಲಿರುವ ಸ್ಪಿರಿಟ್, 2026ರಲ್ಲಿ ಸಿನಿಪ್ರೇಕ್ಷಕರ ಮುಂದೆ ಹಾಜರಾಗಲು ಎದುರುನೋಡುತ್ತಿದೆ,(ಏಜೆನ್ಸೀಸ್).