ಹುಟ್ಟು ಹಬ್ಬದ ದಿನವೇ ರಾಖಾ ಸಿನಿಮಾದ ಪೋಸ್ಟರ್ ಬಿಡುಗಡೆ
- 44 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟ ಅಲ್ಲು ಅರ್ಜುನ್
- ಹುಟ್ಟು ಹಬ್ಬದ ದಿನವೇ ರಾಖಾ ಸಿನಿಮಾದ ಪೋಸ್ಟರ್ ಬಿಡುಗಡೆ
- ಅಟ್ಲೀ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ
- ಅಲ್ಲು ಅರ್ಜುನ್ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ
ಟಾಲಿವುಡ್: ತೆಲಗು ನಟ ಅಲ್ಲು ಅರ್ಜುನ್ ಅವರ 44 ನೇ ಹುಟ್ಟು ಹಬ್ಬದ ದಿನದಂದು ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ.
ನಟ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಅಟ್ಲೀ ಜೋಡಿಯಲ್ಲಿ ಮೂಡಿಬರಲಿದೆ ಎಂದು ಹೇಳಲಾಗುತ್ತಿದ್ದ ಸಿನಿಮಾದ ಹೆಸರು ಈಗ ರೀವಿಲ್ ಆಗಿದ್ದು, ಈ ಬಹು ನೀರಿಕ್ಷಿತ ಸಿನಿಮಾದ ಹೆಸರನ್ನು 'ರಾಖಾ' (Allu Arjun as Raaka) ಎಂದು ಇಡಲಾಗಿದೆ. ಬಿಡುಗಡೆಯಾಗಿರುವ ಪೋಸ್ಟರ್ನಲ್ಲಿ ಅಲ್ಲು ಅರ್ಜುನ್ ಬಾಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ಗೆ ನಾಯಕ ನಟಿಯಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದು, 2023 ರಲ್ಲಿ ಶಾರುಕ್ ಖಾನ್ ಜೊತೆ ಜವಾನ್ ಸಿನಿಮಾದ ನಂತರ ಅಟ್ಲೀ ಮತ್ತೊಮ್ಮೆ ನಿರ್ದೇಶಕನ ಕ್ಯಾಪ್ ತೊಡಲಿದ್ದಾರೆ.
ಇನ್ನೊಂದು ಕಡೆ ಪುಷ್ಪಾ ಸಿನಿಮಾ ಸರಣಿಯ ಭಾರಿ ಯಶಸ್ಸಿನ ನಂತರ ಈಗ ಸ್ವಲ್ಪ ವಿಭಿನ್ನ ಶೈಲಿಯ ಸಿನಿಮಾದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾದ ಪ್ರೊಡಕ್ಷನ್ ಕೆಲಸ ಈಗಾಗಲೇ ಆರಂಭವಾಗಿದ್ದು, ಈ ಚಿತ್ರವು ಎರಡು ಭಾಗಗಳಲ್ಲಿ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ. 2026 ರ ಕೊನೆಯಲ್ಲಿ ಈ ಸಿನಿಮಾದ ಮೊದಲ ಭಾಗ ಬಿಡುಗಡೆಯಾಗುವ ಕುರಿತು ಸುದ್ದಿಯಿದೆ ಆದರೆ ಈ ಕುರಿತು ಸಿನಿಮಾ ತಂಡ ಯಾವುದೇ ಅಧಿಕೃತ ಹೇಳಿಕೆನ್ನು ನೀಡಿಲ್ಲ.
ಅಲ್ಲು ಅರ್ಜುನ್ ಬಗ್ಗೆ
ಅಲ್ಲು ಅರ್ಜುನ್ ಭಾರತೀಯ ಚಿತ್ರರಂಗದ, ಅದರಲ್ಲೂ ಮುಖ್ಯವಾಗಿ ತೆಲುಗು ಸಿನಿಮಾದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ಇವರು ಏಪ್ರಿಲ್ 8, 1982 ರಂದು ಚೆನ್ನೈನಲ್ಲಿ ಜನಿಸಿದರು. ಪ್ರಸಿದ್ಧ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರರಾದ ಇವರು, 2003 ರಲ್ಲಿ ಗಂಗೋತ್ರಿ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಆರ್ಯ, ಬನ್ನಿ, ದೇಶಮುದುರು ಮತ್ತು ಆರ್ಯ 2 ನಂತಹ ಸೂಪರ್ ಹಿಟ್ ಚಿತ್ರಗಳ ಮೂಲಕ ಯುವಜನತೆಯ ಮನಗೆದ್ದರು.
ಇವರ ಅದ್ಭುತ ನೃತ್ಯ ಶೈಲಿ ಮತ್ತು ವಿಭಿನ್ನ ಮ್ಯಾನರಿಸಂನಿಂದಾಗಿ ಇವರನ್ನು ಅಭಿಮಾನಿಗಳು ಪ್ರೀತಿಯಿಂದ ಸ್ಟೈಲಿಶ್ ಸ್ಟಾರ್ ಎಂದು ಕರೆಯುತ್ತಿದ್ದರು, ಆದರೆ ಪುಷ್ಪ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಇವರು ಐಕಾನ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಪುಷ್ಪ: ದ ರೈಸ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿರುವ ಅಲ್ಲು ಅರ್ಜುನ್, ಈ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಮೊದಲ ತೆಲುಗು ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇವಲ ಆಂಧ್ರ-ತೆಲಂಗಾಣ ಮಾತ್ರವಲ್ಲದೆ ಕರ್ನಾಟಕ, ಕೇರಳ ಮತ್ತು ಉತ್ತರ ಭಾರತದಲ್ಲೂ ಇವರು ಬೃಹತ್ ಅಭಿಮಾನಿ ಬಳಗವನ್ನು ಹೊಂದಿದ್ದಾರೆ, (ಏಜನ್ಸೀಸ್).