ಕೈ-ಕಾಲು ಇಲ್ಲದಿದ್ದರೇನು? ಸಾಧಿಸುವ ಛಲವೊಂದಿದ್ದರೆ ಸಾಕು; ಪಾಯಲ್ ನಾಗ್ ಸಾಹಸಕ್ಕೆ ಆನಂದ್ ಮಹೀಂದ್ರಾ ಸಲಾಂ! Anand Mahindra on Payal Nag

ಪ್ಯಾರಾ ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕ ಪಡೆದ  ಪಾಯಲ್ ನಾಗ್
ಪ್ಯಾರಾ ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕ ಪಡೆದ ಪಾಯಲ್ ನಾಗ್
Published on

ಪ್ರಮುಖ ಮುಖ್ಯಾಂಶಗಳು

  • ಒಡಿಶಾದ ಪಾಯಲ್ ನಾಗ್ ಈಗ ವಿಶ್ವ ಚಾಂಪಿಯನ್​
  • ಪ್ಯಾರಾ ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕ ಪಡೆದ ಪಾಯಲ್ ನಾಗ್
  • ನೀನೇ ನನ್ನ ಮಂಡೇ ಮೋಟಿವೇಶನ್​ ಎಂದ ಆನಂದ್ ಮಹೀಂದ್ರಾ
ವೈರಲ್​ ಫೋಸ್ಟ್​: ಜೀವನದಲ್ಲಿ ಪುಟ್ಟ ಕಷ್ಟ ಬಂದರೂ ಸೋತು ಕೂರುವವರ ನಡುವೆ, ಎಂಟನೇ ವಯಸ್ಸಿನಲ್ಲಿಯೇ ವಿಧಿಯಾಟಕ್ಕೆ ಎರಡೂ ಕೈ ಹಾಗೂ ಕಾಲುಗಳನ್ನು ಕಳೆದುಕೊಂಡ ಬಾಲಕಿಯೊಬ್ಬಳು, ಇಂದು ಜಗತ್ತೇ ಬೆರಗಾಗುವಂತೆ ಬಿಲ್ಲು ಹಿಡಿದು ನಿಂತಿದ್ದಾಳೆ.
ಇದು ಒಡಿಶಾದ ಬಡ ಕುಟುಂಬದ ಹೆಣ್ಣುಮಗಳು ಪಾಯಲ್ ನಾಗ್ ಅವರ ರೋಚಕ ಹಾಗೂ ಸ್ಪೂರ್ತಿದಾಯಕ ಕಥೆ. ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ನಡೆದ ವಿಶ್ವ ಪ್ಯಾರಾ ಬಿಲ್ಲುಗಾರಿಕೆ ಸರಣಿಯಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿರುವ ಪಾಯಲ್ ಅವರ ಸಾಧನೆಯನ್ನು ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ (Anand Mahindra on Payal Nag) ಕೊಂಡಾಡಿದ್ದಾರೆ.

ಪಾಯಲ್​ ನನ್ನ ಪ್ರೇರಣೆಯ ಮೂಲ

ಪಾಯಲ್ ಅವರ ಈ ಸಾಹಸವನ್ನು ಕಂಡು ಭಾವುಕರಾದ ಉದ್ಯಮಿ ಆನಂದ್ ಮಹೀಂದ್ರಾ ಅವರು ಎಕ್ಸ್​ (ಟ್ವಿಟರ್) ನಲ್ಲಿ ಸುದೀರ್ಘ ಟಿಪ್ಪಣಿ ಹಂಚಿಕೊಂಡಿದ್ದಾರೆ. ಪಾಯಲ್ ನಾಗ್, ಒಡಿಶಾದ ದಿನಗೂಲಿ ಕಾರ್ಮಿಕನ ಮಗಳು. ಎಂಟನೇ ವಯಸ್ಸಿನಲ್ಲಿ ಎಲ್ಲವನ್ನೂ ಕಳೆದುಕೊಂಡರೂ, ಇಂದು ಬಿಲ್ಲುಗಾರಿಕೆಯಲ್ಲಿ ವಿಶ್ವವನ್ನೇ ಗೆದ್ದಿದ್ದಾಳೆ. ಇಂತಹ ಚಾಂಪಿಯನ್‌ಗಳು ನನ್ನ ಸೋಮವಾರದ ಪ್ರೇರಣೆ ಮಾತ್ರವಲ್ಲ, ಅವರು ಪ್ರತಿ ದಿನದ ಪ್ರೇರಣೆಯ ಮೂಲ ಎಂದು ಬರೆದುಕೊಂಡಿದ್ದಾರೆ.
ಎಂಟನೇ ವಯಸ್ಸಿನಲ್ಲಿ ಸಂಭವಿಸಿದ ಆ ಕರಾಳ ಘಟನೆ!
ಒಡಿಶಾದ ಬಲಂಗಿರ್ ಜಿಲ್ಲೆಯ ದಿನಗೂಲಿ ಕಾರ್ಮಿಕರ ಮಗಳಾಗಿ ಜನಿಸಿದ ಪಾಯಲ್ ಅವರ ಬದುಕು ಸುಗಮವಾಗಿರಲಿಲ್ಲ. ಎಂಟನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ವಿದ್ಯುತ್ ಅವಘಡ ಅವರ ಜೀವನವನ್ನೇ ಬದಲಿಸಿತು. ಈ ಭೀಕರ ಅಪಘಾತದಲ್ಲಿ ಪಾಯಲ್ ತಮ್ಮ ಎರಡು ಕೈ ಮತ್ತು ಕಾಲುಗಳನ್ನು ಕಳೆದುಕೊಂಡರು. ಬದುಕೇ ಮುಗಿದುಹೋಯಿತು ಎನ್ನುವ ಸಮಯದಲ್ಲಿ, ಆಕೆಯಲ್ಲಿದ್ದ ಬದುಕುವ ಛಲ ಮಾತ್ರ ಕುಗ್ಗಿರಲಿಲ್ಲ.

ಟ್ವಿಸ್ಟ್ ಕೊಟ್ಟ ಸೋಶಿಯಲ್ ಮೀಡಿಯಾ!

ಪಾಯಲ್ ಅವರ ಜೀವನಕ್ಕೆ ಹೊಸ ತಿರುವು ಸಿಕ್ಕಿದ್ದು 2023ರಲ್ಲಿ. ಅಂದು ಪ್ರಸಿದ್ಧ ಕೋಚ್ ಕುಲದೀಪ್ ವೇದ್ವಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಪಾಯಲ್ ಅವರನ್ನು ಗಮನಿಸಿದರು. ಈ ಕುಲದೀಪ್ ಅವರು ವಿಶ್ವಪ್ರಸಿದ್ಧ ಬಿಲ್ಲುಗಾರ್ತಿ ಶೀತಲ್ ದೇವಿ ಅವರಿಗೆ ತರಬೇತಿ ನೀಡಿದವರು. ಪಾಯಲ್ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿದ ವೇದ್ವಾನ್, ಆಕೆಗೆ ಬಿಲ್ಲುಗಾರಿಕೆಯ ತರಬೇತಿ ನೀಡಲು ಪ್ರಾರಂಭಿಸಿದರು. ಕೈಗಳಿಲ್ಲದಿದ್ದರೂ ಕಾಲು ಹಾಗೂ ಬಾಯಿಯ ಸಹಾಯದಿಂದ ಹೇಗೆ ಗುರಿ ಇಡಬೇಕು ಎಂಬುದರಲ್ಲಿ ಪರಣಿತಿಯನ್ನು ಧಾರೆ ಎರೆದರು.

ತನ್ನ ರೋಲ್​ ಮಾಡೆಲ್​ನ್ನೇ ಸೋಲಿಸಿದ ಪಾಯಲ್

ಕಳೆದ ಶನಿವಾರ ಬ್ಯಾಂಕಾಕ್‌ನಲ್ಲಿ ನಡೆದ ವಿಶ್ವ ಪ್ಯಾರಾ ಬಿಲ್ಲುಗಾರಿಕೆ ಸರಣಿಯ ಫೈನಲ್ ಪಂದ್ಯ ಅತ್ಯಂತ ಕುತೂಹಲಕಾರಿಯಾಗಿತ್ತು. ಈ ಪಂದ್ಯದಲ್ಲಿ ಪಾಯಲ್ ಎದುರಿಸಿದ್ದು ಮತ್ಯಾರನ್ನಲ್ಲ, ತಮ್ಮದೇ ಆರಾಧ್ಯ ದೈವ ಹಾಗೂ ವಿಶ್ವ ಚಾಂಪಿಯನ್ ಶೀತಲ್ ದೇವಿ ಅವರನ್ನು. ಅಂತಿಮವಾಗಿ ಅದ್ಭುತ ಪ್ರದರ್ಶನ ನೀಡಿದ ಪಾಯಲ್ ನಾಗ್, ಶೀತಲ್ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net