ಸ್ಪಿರಿಟ್ ಫಸ್ಟ್ ಲುಕ್ನಲ್ಲಿ ನಟ ಪ್ರಭಾಸ್ ಮಿಂಚು
- ಬ್ಲಾಕ್ಬಸ್ಟರ್ ಬಾಹುಬಲಿ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಪ್ರಭಾಸ್
- ಪ್ರಭಾಸ್ ಅವರು ಒಂದು ಬಹುದೊಡ್ಡ ಯಶಸ್ಸಿಗಾಗಿ ಎದುರು ನೋಡುತ್ತಿದ್ದಾರೆ
- ಆ ಯಶಸ್ಸನನ್ನು ಸ್ಪಿರಿಟ್ ಸಿನಿಮಾ ತಂದುಕೊಡಬಹುದು ಎಂಬ ಲೆಕ್ಕಾಚಾರವಿದೆ
- ಹೊಸ ವರ್ಷದಂದೇ ಸ್ಪಿರಿಟ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ
ಹೈದರಾಬಾದ್: ಬ್ಲಾಕ್ಬಸ್ಟರ್ ಬಾಹುಬಲಿ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಪ್ರಭಾಸ್ ( Actor Prabhas ), ಒಂದೊಳ್ಳೆ ಯಶಸ್ಸಿಗಾಗಿ ಎದುರು ನೋಡುತ್ತಿದ್ದಾರೆ. ಬಾಹುಬಲಿ ನಂತರ ಬಂದ ಯಾವ ಸಿನಿಮಾಗಳು ಕೂಡ ಅಷ್ಟರಮಟ್ಟಿಗೆ ಯಶಸ್ಸು ತಂದುಕೊಡಲಿಲ್ಲ. ಸಾಹೋ, ರಾಧೆಶ್ಯಾಮ್, ಆದಿಪುರುಷ ಸಿನಿಮಾಗಳು ಫ್ಲಾಪ್ ಆದವು. ಸಲಾರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದರು ಕೂಡ ನಿರೀಕ್ಷೆಯ ಮಟ್ಟ ತಲುಪಲಿಲ್ಲ. ಕಲ್ಕಿ ಸಿನಿಮಾ ಭರ್ಜರಿ ಯಶಸ್ಸು ಕಂಡಿತು. ಆದರೆ, ಅದು ಬಹುತಾರಾಗಣ ಸಿನಿಮಾ ಆದ್ದರಿಂದ ಪ್ರಭಾಸ್ ಒಬ್ಬರಿಗೆ ಯಶಸ್ಸಿನ ಕ್ರೆಡಿಟ್ ಹೋಗಲಿಲ್ಲ. ಹೀಗಾಗಿ ಪ್ರಭಾಸ್ ಅವರು ಒಂದು ಬಹುದೊಡ್ಡ ಯಶಸ್ಸಿಗಾಗಿ ಎದುರು ನೋಡುತ್ತಿದ್ದಾರೆ. ಆ ಯಶಸ್ಸನ್ನು ಸ್ಪಿರಿಟ್ ಸಿನಿಮಾ ತಂದುಕೊಡಬಹುದು ಎಂಬ ಲೆಕ್ಕಾಚಾರವನ್ನು ಅಭಿಮಾನಿಗಳು ಹಾಕಿಕೊಂಡಿದ್ದಾರೆ.
ಪ್ರಭಾಸ್ ಅಭಿಮಾನಿಗಳಿಗೆ ಹೊಸ ವರ್ಷದಂದೇ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಅದೇನೆಂದರೆ, ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸ್ಪಿರಿಟ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಪ್ರಭಾಸ್ ಅವರ ನಯಾ ಅವತಾರವನ್ನು ಕಂಡು ಅಭಿಮಾನಿಗಳು ಹುಬ್ಬೇರಿಸಿದ್ದಾರೆ.
ಉದ್ದನೆಯ ಕೂದಲು ಹಾಗೂ ಕಟ್ಟುಮಸ್ತಾದ ದೇಹದೊಂದಿಗೆ ರಗಡ್ ಲುಕ್ನಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಮದ್ಯ ತುಂಬಿದ ಗ್ಲಾಸ್ ಹಿಡಿದು, ಬಾಯಿಯಲ್ಲಿ ಸಿಗರಟೇಟ್ ಕಚ್ಚಿಕೊಂಡಿದ್ದು, ಶರ್ಟ್ಲೆಸ್ ಆಗಿ ಪೋಸ್ ನೀಡಿದ್ದಾರೆ. ದೇಹದಲ್ಲಿ ಅಲ್ಲಲ್ಲಿ ಗಾಯಕ್ಕೆ ಬ್ಯಾಂಡೇಜ್ ಸುತ್ತಿಕೊಂಡಿದ್ದಾರೆ. ಪ್ರಭಾಸ್ ಬಾಯಲ್ಲಿರುವ ಸಿಗರೇಟ್ಗೆ ಲೈಟರ್ ಮೂಲಕ ಬೆಂಕಿ ಹಚ್ಚುವ ಮೂಲಕ ನಟಿ ತೃಪ್ತಿ ದಿಮ್ರಿ ಪೋಸ್ಟರ್ಗೆ ಕಿಚ್ಚು ಹಚ್ಚಿದ್ದಾರೆ.
ಸ್ಪಿರಿಟ್ ಪೋಸ್ಟರ್ ನೋಡಿದವರಿಗೆ ಬಾಲಿವುಡ್ನ ಅನಿಮಲ್ ಸಿನಿಮಾ ನೆನಪಾಗುತ್ತದೆ. ಏಕೆಂದರೆ, ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್ ಅವರ ಲುಕ್ ಕೂಡ ಇದೇ ರೀತಿ ಇತ್ತು. ಅಲ್ಲದೆ, ಆ ಚಿತ್ರದಲ್ಲಿ ತೃಪ್ತಿ ನಾಯಕಿಯಾಗಿದ್ದರು. ಎಲ್ಲಕ್ಕಿಂತ ಮುಖ್ಯವಾದ ಸಂಗತಿ ಏನೆಂದರೆ, ಅನಿಮಲ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸಂದೀಪ್ ರೆಡ್ಡಿ ವಂಗಾ ಅವರೇ ಸ್ಪಿರಿಟ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹೀಗಾಗಿ ಅನಿಮಲ್ ಚಿತ್ರದ ಛಾಯೆ ಸ್ಪಿರಿಟ್ ಚಿತ್ರದ ಪೋಸ್ಟರ್ನಲ್ಲೂ ಕಾಣುತ್ತಿದೆ.
ಸಂದೀಪ್ ರೆಡ್ಡಿ ವಂಗಾ ಅಂದಮೇಲೆ ವಿಶೇಷವಾಗಿ ಹೇಳಬೇಕಿಲ್ಲ. ಏಕೆಂದರೆ, ಸಂದೀಪ್ ನಿರ್ದೇಶನ ಚಿತ್ರಗಳಲ್ಲಿ ನಾಯಕ ಮತ್ತು ನಾಯಕಿಯ ನಡುವೆ ಗಾಢವಾದ ಪ್ರಣಯ ಮತ್ತು ಲಿಪ್ಲಾಕ್ ದೃಶ್ಯಗಳಿರುತ್ತವೆ. ಅಷ್ಟೇ ಅಲ್ಲ, ಕೊಳಕು ಮಾತುಗಳು ಹಾಗೂ ಡಬ್ಬಲ್ ಮೀನಿಂಗ್ ಡೈಲಾಗ್ಗಳಿಗೇನು ಕಡಿಮೆ ಇಲ್ಲ. ಇದಕ್ಕೆ ಉದಾಹರಣೆ, ಅರ್ಜುನ್ ರೆಡ್ಡಿ, ಕಬೀರ್ ಸಿಂಗ್ ಹಾಗೂ ಅನಿಮಲ್ ಚಿತ್ರಗಳು. ಈ ಸಿನಿಮಾಗಳೂ ವಿವಾದವನ್ನು ಹುಟ್ಟುಹಾಕಿದ್ದವು. ಏಕೆಂದರೆ, ಇವೆಲ್ಲವೂ ಎ ಪ್ರಮಾಣಪತ್ರದ ಚಿತ್ರಗಳು. ಈ ಸಿನಿಮಾಗಳಲ್ಲಿ ಸಾಕಷ್ಟು ಸರಸ ದೃಶ್ಯಗಳು ಹಾಗೂ ಆ್ಯಕ್ಷನ್ ಸೀನ್ಗಳು ಇದ್ದವು. ಅಲ್ಲದೆ, ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದವು.
ಹೀಗಾಗಿ ಪ್ರಭಾಸ್ ನಟನೆನ ಸ್ಪಿರಿಟ್ ಸಿನಿಮಾದಲ್ಲಿಯೂ ಅಭಿಮಾನಿಗಳನ್ನು ಅದನ್ನೇ ನಿರೀಕ್ಷೆ ಮಾಡುತ್ತಿದ್ದಾರೆ. ಸ್ಪಿರಿಟ್ ಚಿತ್ರದಲ್ಲಿ ಪ್ರಭಾಸ್ ಅವರು ಪೊಲೀಸ್ ಪಾತ್ರದಲ್ಲಿ ನಟಿಸುತ್ತಿರುವುದರಿಂದ, ಅಭಿಮಾನಿಗಳು ಭಾರಿ ಆಕ್ಷನ್ ಸನ್ನಿವೇಶಗಳನ್ನು ಎದುರು ನೋಡುತ್ತಿದ್ದಾರೆ. ಅಲ್ಲದೆ, ಪ್ರಣಯ ದೃಶ್ಯಗಳನ್ನು ನಿರೀಕ್ಷಿಸಿದ್ದಾರೆ. ಹೊಸ ವರ್ಷದಂದು ಬಿಡುಗಡೆಯಾಗಿರುವ ಸ್ಪಿರಿಟ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅದರ ಸುಳಿವು ನೀಡಿದೆ.
ಸಂದೀಪ್ ರೆಡ್ಡಿ ಚಿತ್ರವಾಗಿರುವುದರಿಂದ ಪ್ರಭಾಸ್ ಮತ್ತು ತ್ರಿಪ್ತಿ ದಿಮ್ರಿ ನಡುವೆ ಲಿಪ್ಲಾಕ್ ದೃಶ್ಯಗಳು ಮತ್ತು ಇಬ್ಬರ ನಡುವೆ ತೀವ್ರವಾದ ಪ್ರಣಯ ದೃಶ್ಯಗಳು ಇರುವುದು ಖಚಿತ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಪ್ರಭಾಸ್ ನಟನೆಯ ದಿ ರಾಜಾ ಸಾಬ್ ಸಿನಿಮಾ ಜನವರಿಯಲ್ಲಿ ಬಿಡುಗಡೆಯಾಗಲಿದೆ, (ಏಜೆನ್ಸೀಸ್).