ಸಿನಿವಾಣಿ

ಬಾಕ್ಸ್ ಆಫೀಸ್​ ಧೂಳೆಬ್ಬಿಸ್ತಿದ್ದ ಸೌತ್​​ ಬ್ಯೂಟೀಸ್ ಈಗ ಟಾಲಿವುಡ್​ನಿಂದಲೇ ದೂರ! ದಿಕ್ಕು ಬದಲಿಸಿದ ಗ್ಲಾಮರಸ್​ ನಟಿಯರಿವರು... | South Heroines

South Heroines: ಒಂದು ಕಾಲದಲ್ಲಿ ತಮ್ಮ ಗ್ಲಾಮರ್ ಹಾಗೂ ನಟನೆಯಿಂದಲೇ ತೆಲುಗು ಅಭಿಮಾನಿಗಳು ಮತ್ತು ಬಾಕ್ಸ್ ಆಫೀಸ್​ ಆಳುತ್ತಿದ್ದ ಸ್ಟಾರ್ ಹೀರೋಯಿನ್​ಗಳು ಈಗ ಅದೇ ಟಾಲಿವುಡ್​ನಿಂದ ಕಣ್ಮರೆಯಾಗುವ ಮೂಲಕ ದಿಕ್ಕು ಬದಲಿಸಿರುವುದು ನಟಿಮಣಿಯರ ಫ್ಯಾನ್ಸ್​ಗಳಿಗೆ ಕೊಂಚ ಬೇಸರ ಮೂಡಿಸಿದೆ ಎಂದರೆ ಖಂಡಿತ ತಪ್ಪಾಗಲಾರದು. ಕೆಲವರು ಟಾಲಿವುಡ್​ನಿಂದ ಕಂಪ್ಲೀಟ್ ದೂರವಾಗಿದ್ದರೆ, ಇನ್ನೂ ಕೆಲವರು ಇತರೆ ಚಿತ್ರರಂಗದತ್ತ ಒಲುವು ತೋರಿರುವುದು ಅಚ್ಚರಿಯ ಬೆಳವಣಿಗೆ.

ಪ್ರಿನ್ಸ್ ಮಹೇಶ್​ ಬಾಬು, ರೆಬೆಲ್​ ಸ್ಟಾರ್​ ಪ್ರಭಾಸ್, ನಿತಿನ್​, ಹಿರಿಯ ನಟ ಬಾಲಯ್ಯ, ರಾಮ್​ ಚರಣ್​, ಅಲ್ಲು ಅರ್ಜುನ್​ರಂತಹ ಸ್ಟಾರ್​ ಹೀರೋಗಳಿಗೆ ಇವರೇ ಸಖತ್ ಜೋಡಿ ಆಗಿ ಬೆಳ್ಳಿಪರದೆಯ ಮೇಲೆ ಮಿಂಚುತ್ತಿದ್ದ ನಟಿಮಣಿಯರು, ಅಂದು ನಟಿಸುತ್ತಿದ್ದ ಬಹುತೇಕ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಸೂಪರ್​ಹಿಟ್​ ಆಗುತ್ತಿದ್ದವು. ಯಾವುದೋ ಒಂದೋ ಎರಡೋ ಚಿತ್ರಗಳು ಫ್ಲಾಪ್​ ಆಗಿದ್ದು ಬಿಟ್ಟರೆ, ಉಳಿದೆಲ್ಲ ಪ್ರೇಕ್ಷಕರ ಎದುರು ಕಮಾಲ್​ ಮಾಡುತ್ತಿದ್ದವು. ಆದರೀಗ, ಅದೇ ಸೌತ್ ಬ್ಯೂಟೀಸ್​ ಟಾಲಿವುಡ್​ನ ಬಿಟ್ಟು ಮರೆಯಾಗಿರುವುದು ಚಿತ್ರರಂಗದ ವರ್ಷದ ಬಾಕ್ಸ್ ಆಫೀಸ್​ ಗಳಿಕೆಗೆ ಒಂದು ರೀತಿ ಹೊಡೆತ ಕೊಟ್ಟಿದೆ ಹಾಗೂ ಸಿನಿಪ್ರಿಯರ ಕ್ರೇಜ್​ ಅನ್ನು ಕುಸಿಯುವಂತೆ ಮಾಡಿದೆ ಎಂದೇ ಹೇಳಬಹುದು.

ಸಿನಿಮಾ ಕಥೆಗಳ ಆಯ್ಕೆಯಲ್ಲಿ ಬದಲಾವಣೆ ಆಗುತ್ತಿರುವುದರಿಂದ ಟಾಲಿವುಡ್​ಗೆ ಕೊಂಚ ಗ್ಯಾಪ್ ಕೊಟ್ಟಂತಿದೆ. ಈ ವರ್ಷ ‘ಮಾ ಇಂತಿ ಬಂಗಾರಂ’ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರನ್ನು ಮತ್ತೇ ರಂಜಿಸಿದ ಸಮಂತಾ, ದಾಂಪತ್ಯ ಜೀವನದ ಬಳಿಕವೂ ಟಾಲಿವುಡ್​ ಸಿನಿಪ್ರೇಕ್ಷಕರಿಗೆ ಕೈಬೀಸಿದ್ದಾರೆ. ಆದರೆ, ಉಳಿದವರ ಪೈಕಿ ಕೆಲವರು ಸ್ಟಾರ್​ ಸೀನಿಯರ್ ನಟಿಯರು, ಬಾಲಿವುಡ್ ಹಾದಿ ಹಿಡಿದರೆ, ಇನ್ನು ಕೆಲವರು ಕಾಲಿವುಡ್ ಕಡೆ ಮುಖ ಮಾಡಿದ್ದಾರೆ. ಇನ್ನೂ ಒಂದಷ್ಟು ಹೀರೋಯಿನ್​ಗಳು ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳದೇ, ತಮ್ಮ ವೈಯಕ್ತಿಕ ಜೀವನದಲ್ಲಿ ಬಿಜಿಯಿದ್ದಾರೆ.

'ಸ್ವೀಟಿ' ಅನುಷ್ಕಾ ಶೆಟ್ಟಿ

ಈ ಪಟ್ಟಿಯಲ್ಲಿ ಮೊದಲಿಗಿರುವ ಹೆಸರೇ 'ಸ್ವೀಟಿ' ಅನುಷ್ಕಾ ಶೆಟ್ಟಿ. ‘ಘಾಟಿ’ ಚಿತ್ರದ ಬಳಿಕ ಅನುಷ್ಕಾ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿಲ್ಲ. ಇದರೊಟ್ಟಿಗೆ ಇತ್ತೀಚೆಗೆ ಅನುಷ್ಕಾ ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸವನ್ನೂ ಮಾರಿ ಬೆಂಗಳೂರಿಗೆ ಶಾಶ್ವತವಾಗಿ ಶಿಫ್ಟ್ ಆಗಿದ್ದಾರೆ ಎಂಬ ಸುದ್ದಿ ಸದ್ಯ ಅವರ ತೆಲುಗು ಅಭಿಮಾನಿಗಳನ್ನು ಭಾರಿ ಬೇಸರಕ್ಕೆ ದೂಡಿದೆ. ಈ ಮಧ್ಯೆ, ಅನುಷ್ಕಾ ನಟಿಸಿರುವ ಮೊದಲ ಮಲಯಾಳಂ ಚಿತ್ರ 'ಕಥನಾರ್' ಥಿಯೇಟರ್‌ಗಳಲ್ಲಿ ಯಾವಾಗ ರಿಲೀಸ್​ ಆಗುತ್ತೆ ಎಂದು ಅನೇಕರು ನಿರೀಕ್ಷೆಯಲ್ಲಿದ್ದಾರೆ.

ಇನ್ನೊಂದೆಡೆ ತಮ್ಮ ಸಹಜ ನಟನೆಯಿಂದಲೇ ಅನೇಕ ಸಿನಿಪ್ರಿಯರನ್ನು ಇಂಪ್ರೆಸ್ ಮಾಡಿರುವ ನಿತ್ಯಾ ಮೆನನ್, ತೆಲುಗು ಪ್ರೇಕ್ಷಕರಿಂದ ದೂರವಾಗಿ ಬಹಳ ದಿನಗಳೇ ಕಳೆದಿವೆ. ಒಂದು ಕಾಲದಲ್ಲಿ ‘ಭೀಮಲಾ ನಾಯಕ್’ ಚಿತ್ರದ ಮೂಲಕ ತೆಲುಗಿನಲ್ಲಿ ಮಿಂಚಿದ್ದ ನಿತ್ಯಾ, ಆ ನಂತರ ಯಾವುದೇ ತೆಲುಗು ಚಿತ್ರಗಳನ್ನು ಮಾಡಿರಲಿಲ್ಲ. ಈ ನಡುವೆ ಸಾಂದರ್ಭಿಕವಾಗಿ ಡಬ್ಬಿಂಗ್ ಚಿತ್ರಗಳಲ್ಲಿ ಕಾಣಿಸಿಕೊಂಡರೂ ಈ ವರ್ಷ ಅದ್ಯಾವುದನ್ನೂ ಮಾಡಿಲ್ಲ. ಸದ್ಯ ಅವರು ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ತಮಿಳಿನ ಚಿತ್ರದ ಚಿತ್ರೀಕರಣದ ಜತೆಗೆ ಹಿಂದಿಯ ‘ಮಿ. ಮತ್ತು ಮಿಸೆಸ್ ಗ್ರೇ' ಬಿಜಿಯಾಗಿದ್ದಾರೆ. ಸರಿಯಾದ ಅವಕಾಶಗಳು ಸಿಗುತ್ತಿಲ್ಲ ಎಂಬ ಕಾರಣಕ್ಕೆ ನಿತ್ಯಾ ತೆಲುಗಿನಿಂದ ದೂರ ಉಳಿದಿದ್ದಾರೆ ಎಂಬ ಮಾತುಗಳು ಟಾಲಿವುಡ್​ ಅಂಗಳದಲ್ಲಿವೆ.

ಸಿನಿಮಾ, ವೆಬ್​ ಸರಣಿಯಲ್ಲಿ ಬಿಜಿ

ಇನ್ನು, ಒಂದು ದಶಕದಲ್ಲಿ ಟಾಲಿವುಡ್​ನಲ್ಲಿ ಸಾಲು ಸಾಲು ಹಿಟ್​ ಸಿನಿಮಾಗಳ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡ 'ಮಿಲ್ಕಿ ಬ್ಯೂಟಿ' ತಮನ್ನಾ ಅವರ ಪರಿಸ್ಥಿತಿಯೂ ಇದೇ ಆಗಿದೆ. ಇವರ ಜತೆ ರಾಕುಲ್ ಪ್ರೀತ್​ ಕೂಡ. ಇವರಿಬ್ಬರಿಗೂ ತೆಲುಗು ಚಿತ್ರಗಳಲ್ಲಿ ನಟಿಸಲು ಆಸಕ್ತಿಯಿದ್ದರೂ, ಯುವ ನಾಯಕಿಯರ ಎಂಟ್ರಿಯಿಂದ ಮತ್ತು ಅವರ ಗ್ಲಾಮರ್ ಲುಕ್​ನಿಂದ ಸದ್ಯಕ್ಕೆ ಸರಿಯಾದ ಆಫರ್‌ಗಳು ಲಭಿಸುತ್ತಿಲ್ಲ. ಹೀಗಾಗಿ, ಇಬ್ಬರೂ ಸದ್ಯ ಬಾಲಿವುಡ್​ನ ಹಲವಾರು ಸಿನಿಮಾ, ವೆಬ್​ ಸರಣಿಗಳಲ್ಲಿ ಹೆಚ್ಚಾಗಿ ಬಿಜಿಯಾಗಿದ್ದಾರೆ.

ಇತ್ತೀಚೆಗಷ್ಟೇ ರಿಲೀಸ್ ಆದ ನಿತೇಶ್ ತಿವಾರಿ ಅವರ ‘ರಾಮಾಯಣ’ ಚಿತ್ರದಲ್ಲಿ ರಾಕುಲ್‌ ಶೂರ್ಪಣಖಿ ಪಾತ್ರದಲ್ಲಿ ಮಿಂಚಿದ್ದರೆ, ತಮನ್ನಾ ‘ವಿವಾನ್‌’ ಚಿತ್ರದ ಮೂಲಕ ಹಿಂದಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಪ್ರಸ್ತುತ, ತಮನ್ನಾ ಅವರು ಹೆಚ್ಚಾಗಿ ಬಾಲಿವುಡ್ ಪ್ರಾಜೆಕ್ಟ್​ಗಳನ್ನೇ ಫೋಕಸ್​ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇನ್ನು, ಟಾಲಿವುಡ್​ನಲ್ಲಿ 'ಮಗಧೀರ', 'ಆರ್ಯ-2', 'ಮಾರಿ' ಚಿತ್ರಗಳಿಂದಲೇ ತೆಲುಗು ಅಭಿಮಾನಿಗಳ ಹೃದಯ ಕದ್ದ ಚೆಲುವೆ, ನಟಿ ಕಾಜಲ್ ಅಗರ್ವಾಲ್ ಕೂಡ 'ಸತ್ಯಭಾಮ' ಚಿತ್ರದ ನಂತರ ಪೂರ್ಣ ಪ್ರಮಾಣದಲ್ಲಿ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿಲ್ಲ.

ಕಳೆದ ವರ್ಷ 'ಕಣ್ಣಪ್ಪ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಾಜಲ್, ಈ ವರ್ಷ ಹಿಂದಿ ಚಿತ್ರಗಳಾದ 'ದಿ ಇಂಡಿಯಾ ಸ್ಟೋರಿ' ಮತ್ತು 'ರಾಮಾಯಣ'ದಲ್ಲಿ ಮಂಡೋದರಿ ಪಾತ್ರದಲ್ಲಿ ಕೆಲವೇ ನಿಮಿಷಗಳ ದೃಶ್ಯದಲ್ಲಿ ಅಭಿನಯಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ತಂದಿಲ್ಲ. ಆದರೆ, ಈ ವರ್ಷಾಂತ್ಯದಲ್ಲಿ ತೆಲುಗು ಪ್ರೇಕ್ಷಕರಿಗೆ ಕಾಜಲ್​ರಿಂದ ಒಂದು ಸಿನಿಮಾ ರೆಡಿಯಿದೆ.

ನಂದಮೂರಿ ಬಾಲಕೃಷ್ಣ ಅಭಿನಯದ ‘ದಾದಾ’ ಚಿತ್ರದಲ್ಲಿ ಪವರ್ ಫುಲ್ ಪಾತ್ರದಲ್ಲಿ ಕಾಜಲ್​ ನಟಿಸಿದ್ದಾರೆ ಎನ್ನಲಾಗಿದೆ. ಈ ಚಿತ್ರವು ಇದೇ ಡಿಸೆಂಬರ್ 24ಕ್ಕೆ ತೆರೆ ಕಾಣುವ ಸಾಧ್ಯತೆಯಿದೆ. ವರ್ಷಾಂತ್ಯದಲ್ಲಿ ಕಾಜಲ್ ಟಾಲಿವುಡ್​ ಜತೆ ಇನ್ನೂ ಟಚ್​ನಲ್ಲಿದ್ದರೆ, ಅತ್ತ ಅನುಷ್ಕಾ, ರಾಕುಲ್, ನಿತ್ಯಾ ಮೆನನ್, ತಮನ್ನಾ ಸೇರಿದಂತೆ ಕೆಲವು ಸ್ಟಾರ್ ನಟಿಯರು ಮತ್ತೇ ತೆಲುಗಿನಲ್ಲಿ ಯಾವಾಗ ಸದ್ದು ಮಾಡುತ್ತಾರೋ ಎಂಬ ನಿರೀಕ್ಷೆಯಲ್ಲಿ ಫ್ಯಾನ್ಸ್ ಇದ್ದಾರೆ,(ಏಜೆನ್ಸೀಸ್)​.