ಸಿನಿವಾಣಿ

ಕೋವಿಡ್ ಕಷ್ಟಕಾಲದಲ್ಲಿ ದತ್ತು ಪಡೆದ ಗ್ರಾಮದ ಜನರಿಗೆ ಮಹೇಶ್ ಬಾಬು ವಿಶೇಷ ಸೇವೆ

ಹೈದರಾಬಾದ್: ಕರೊನಾ ಕಷ್ಟಕಾಲದಲ್ಲಿ ಸಿನಿಮಾ ಮಂದಿಯೂ ಕೈಲಾದ ಸಹಾಯಕ್ಕೆ ಮುಂದಾಗುತ್ತಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಕಲಾವಿದರು ರಸ್ತೆಗಿಳಿದು ರೇಷನ್ ಕಿಟ್ ಸೇರಿ ಆಕ್ಸಿಜನ್ ಸೇವೆ ಒದಗಿಸುತ್ತಿದ್ದಾರೆ. ಅದೇ ರೀತಿ ಟಾಲಿವುಡ್​ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಅಲ್ಲಿನ ಸ್ಟಾರ್​ಗಳು ವಿಶೇಷ ಕೆಲಸಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆ ಪೈಕಿ ಮಹೇಶ್​ ಬಾಬು ಎರಡು ಗ್ರಾಮಗಳ ಜನರಿಗೆ ಕೋವಿಡ್ ಲಸಿಕೆ ಕೊಡಿಸಲು ಮುಂದೆ ಬಂದಿದ್ದಾರೆ.

ಹೌದು, ಕಳೆದ ಕೆಲ ವರ್ಷಗಳ ಹಿಂದೆ ತೆಲಂಗಾಣದ ಎರಡು ಗ್ರಾಮಗಳನ್ನು ಅಭಿವೃದ್ಧಿ ಕಾರ್ಯದ ಸಲುವಾಗಿ ಟಾಲಿವುಡ್ ನಟ ಮಹೇಶ್ ಬಾಬು ದತ್ತು ಪಡೆದಿದ್ದರು. ಇದೀಗ ಆ ಎರಡು ಗ್ರಾಮಗಳ ಜನರಿಗೆ ಕೋವಿಡ್ ಲಸಿಕೆ ಒದಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಮೆಹಬೂಬ ನಗರ್ ಜಿಲ್ಲೆಯ ಸಿದ್ದಾಪುರಂ ಮತ್ತು ಗುಂಟೂರು ಜಿಲ್ಲೆಯ ಬುರ್ರಿಪಲೇಮ್ ಗ್ರಾಮಸ್ಥರಿಗೆ ಕೋವಿಡ್ ಲಸಿಕೆ ಕೊಡಿಸಲಿದ್ದಾರೆ.

ಈಗಾಗಲೇ ಈ ಕೆಲಸ ತೆರೆಮರೆಯಲ್ಲಿ ಶುರುವಾಗಿದ್ದು, ತೆಲಂಗಾಣ ಸಿಎಂ ಅವರೊಂದಿಗೆ ಒಂದು ಹಂತದ ಮಾತುಕತೆಯನ್ನೂ ನಡೆಸಿದ್ದಾರೆ. ಅವರಿಂದಲೂ ಹಸಿರು ನಿಶಾನೆ ಸಿಕ್ಕಿದ್ದು, ಲಸಿಕೆ ಲಭ್ಯವಾಗುತ್ತಿದ್ದಂತೆ ಮಹೇಶ್ ಬಾಬು ಅವರ ತಂಡ ಗ್ರಾಮಗಳಿಗೆ ತೆರಳಿ ಲಸಿಕೆ ನೀಡಲಿದೆ. -ಏಜೆನ್ಸೀಸ್​