ಬೆಂಗಳೂರು: ‘ಕನಸಿನ ರಾಣಿ’ ಮಾಲಾಶ್ರೀ ಅಭಿನಯದ ಹೊಸ ಚಿತ್ರವೊಂದು ಬಿಡುಗಡೆಯಾಗಿ ಮೂರು ವರ್ಷಗಳೇ ಆಗಿವೆ. 2017ರಲ್ಲಿ ಬಿಡುಗಡೆಯಾದ ‘ಉಪ್ಪು ಹುಳಿ ಖಾರ’ ಚಿತ್ರವೇ ಕೊನೆ. ಆ ನಂತರ ಮಾಲಾಶ್ರೀ ಯಾವ ಚಿತ್ರದಲ್ಲೂ ನಟಿಸಿಲ್ಲ. ಅವರು ಮತ್ತೆ ಬಣ್ಣ ಹಚ್ಚೋದು ಯಾವಾಗ? ಕ್ಯಾಮರಾ ಮುಂದೆ ನಿಲ್ಲೋದು ಯಾವಾಗ? ಈ ಪ್ರಶ್ನೆಗಳು ಅವರ ಅಭಿಮಾನಿಗಳನ್ನು ಕಾಡುತ್ತಿವೆ. ಇಂದು (ಆ. 10) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಮಾಲಾಶ್ರೀ, ಅಭಿಮಾನಿಗಳು ಖುಷಿಪಡುವಂತಹ ಸುದ್ದಿ ಕೊಟ್ಟಿದ್ದಾರೆ. ‘ವಿಜಯವಾಣಿ’ಯೊಂದಿಗೆ ಮಾತನಾಡಿರುವ ಅವರು, ಮುಂದಿನ ವರ್ಷ ಹೊಸದೊಂದು ಚಿತ್ರದ ಮೂಲಕ ವಾಪಾಸು ಬರುವುದಾಗಿ ಹೇಳಿದ್ದಾರೆ. ಅಷ್ಟಕ್ಕೂ ಮಾಲಾಶ್ರೀ ಏನೆಲ್ಲಾ ಮಾತಾಡಿದ್ದಾರೆ ಎಂಬುದರ ಅಕ್ಷರ ರೂಪ ಇಲ್ಲಿದೆ...
ಇದೆಲ್ಲಾ ಬೇಗ ಮುಗಿಯಲಿ: ‘ನಾನು ಬೇರೆ ಚಿತ್ರಗಳನ್ನು ನೋಡುವುದು ಕಡಿಮೆ. ಆದರೆ, ಮಕ್ಕಳು ‘ಅವೆಂಜರ್ಸ್’, ‘ಹ್ಯಾರಿ ಪಾಟರ್’ ಸಿನಿಮಾಗಳನ್ನು ತೋರಿಸಿದರು. ಒಂದಿಷ್ಟು ಹೊಸ ರೆಸಿಪಿಗಳನ್ನು ಪ್ರಯತ್ನಿಸಿದೆ. ಪ್ರತಿ ದಿನ ವರ್ಕೌಟ್ ಮಾಡುತ್ತಿದ್ದೆ. ಹೀಗೆ ಲಾಕ್ಡೌನ್ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಆದರೆ, ಈ ವರ್ಷ ಎಲ್ಲರಿಗೂ ಬಹಳ ಅನ್ಲಕ್ಕಿ ಅನಿಸುತ್ತಿದೆ. ಕರೊನಾ, ಮಳೆ, ಸಾವು-ನೋವು ... ನಾನು ಇಷ್ಟು ವರ್ಷಗಳಲ್ಲಿ ಇಂಥದ್ದೊಂದು ಕೆಟ್ಟ ವರ್ಷ ನೋಡಿಲ್ಲ. ಒಂದಲ್ಲಾ ಒಂದು ಕಾರಣಕ್ಕೆ ಜನ ನೋವು ಅನುಭವಿಸುತ್ತಲೇ ಇದ್ದಾರೆ. ಎಲ್ಲಾ ಕಡೆ ಭಯದ ವಾತಾವರಣವಿದೆ. ಇದೆಲ್ಲಾ ಬೇಗ ಕಳೆದು, ಎಲ್ಲರಿಗೂ ಒಳ್ಳೆಯದಾಗಲಿ, ಎಲ್ಲರೂ ಪುನಃ ಒಳ್ಳೆಯ ದಿನಗಳನ್ನು ನೋಡುವಂತಾಗಲಿ ಎನ್ನುವುದಷ್ಟೇ ನನ್ನ ಆಸೆ’.
ಕಾಮಿಡಿ ಚಿತ್ರ ಮಾಡುವಾಸೆ: ‘ಹೊಸ ಆಫರ್ಗಳು ಬರುತ್ತಲೇ ಇವೆ. ಆದರೆ, ನನಗ್ಯಾಕೋ ಖುಷಿಯಾಗಲಿಲ್ಲ. ಆಕ್ಷನ್ ಚಿತ್ರಗಳೇ ಹೆಚ್ಚುಹೆಚ್ಚು ಬರುತ್ತಿವೆ. ಅದೇ ಆಫೀಸರ್ ಪಾತ್ರ, ಸಮಾಜಕ್ಕೊಂದು ಸಂದೇಶ ಅವೇ ಮುಂದುವರೆಯು ತ್ತಿವೆ. ಈ ತರಹದ ಪಾತ್ರಗಳನ್ನು ಸಾಕಷ್ಟು ಮಾಡಿದ್ದೇನೆ. ಆದರೆ, ಕಾಮಿಡಿ ಪಾತ್ರ ಮಾಡಿ ಬಹಳ ವರ್ಷಗಳೇ ಕಳೆದಿವೆ. ಆ ಬಗ್ಗೆಯೂ ಒಲವಿದೆ. ಸದ್ಯಕ್ಕೆ ಯಾವ ಸಿನಿಮಾನೂ ಒಪ್ಪಿಲ್ಲ. ನಮ್ಮ ಬ್ಯಾನರ್ನಲ್ಲೇ ಸಿನಿಮಾ ಮಾಡುವ ಬಗ್ಗೆ ಕೆಲಸ ನಡೆಯುತ್ತಿದೆ. ಅಂತಿಮವಾಗುವುದಕ್ಕೆ ಸ್ವಲ್ಪ ಸಮಯಬೇಕು’.
ಸ್ವಲ್ಪವೂ ಪ್ರೀತಿ ಕಡಿಮೆಯಾಗಿಲ್ಲ: ಪ್ರತಿ ವರ್ಷದಂತೆ ಈ ವರ್ಷದ ಹುಟ್ಟುಹಬ್ಬ ಸಹ ಬಹಳ ಸರಳವಾಗಿ ನಡೆಯಲಿದೆ. ನಾನು ಯಾವತ್ತೂ ಪಾರ್ಟಿ ಅಂತ ಹೋದವಳಲ್ಲ. ಮನೆಯವರ ಜತೆಗೆ ಸರಳವಾಗಿ ಆಚರಿಸಿಕೊಂಡು ಬಂದಿದ್ದೇನೆ. ಅಭಿಮಾನಿ ಗಳು ಕೇಕ್ ತೆಗೆದುಕೊಂಡು ಬರುತ್ತಾರೆ. ಅವರ ಪ್ರೀತಿ, ಅಭಿಮಾನ ನಿಜಕ್ಕೂ ಖುಷಿ ಕೊಡುತ್ತದೆ. ನನ್ನ ಸಿನಿಮಾಗಳು ಬರದಿದ್ದರೂ, ಅವರ ಪ್ರೀತಿ ಕಡಿಮೆ ಆಗಿಲ್ಲ. ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ, ಬೇಗ ಚಿತ್ರ ಮಾಡಿ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಹಾಗಾಗಿ ಜಾಲತಾಣದ ಮೂಲಕ ಸಂಪರ್ಕದಲ್ಲಿರುತ್ತೇನೆ.